ಬೆಳಗಾವಿ-29: ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ 77 ಜನ್ಮ ದಿನದ ಸಂಭ್ರಮಾಚರಣೆ ಅಂಗವಾಗಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರವು ಆರ್ಥಿಕವಾಗಿ ಹಿಂದುಳಿದ ಹಾಗೂ ಸರಕಾರದ ಯಾವುದೇ ವೈದ್ಯಕೀಯ ಯೋಜನೆಗೊಳಪಡದ 100 ರೋಗಿಗಳಿಗೆ ಉಚಿತ ಎಂಜಿಯೊಗ್ರಾಪಿ ಹಾಗೂ ಆಯ್ದ 25 ಜನರಿಗೆ ಎಂಜಿಯೋಪ್ಲಾಸ್ಟಿ ನೆರವೇರಿಸಲಾಗುತ್ತದೆ.
ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು, ರೋಗಿಯು ಆರ್ಥಿಕವಾಗಿ ಹಿಂದುಳಿದವರಾಗಿರಬೇಕು ಮತ್ತು ಸರಕಾರಿ ಯೋಜನೆಯ ಯಾವುದೇ ಲಾಭಾರ್ಥಿಯಾಗಿರಬಾರದು. ಕುಟುಂಬದಿಂದ ವಂಚಿತರಾದ ಹಿರಿಯ ನಾಗರೀಕರು ಈ ಯೋಜನೆಗೆ ಅರ್ಹರು. ಪ್ರಥಮ ಬಂದ 100 ಜನರಿಗೆ ಎಂಜಿಯೋಗ್ರಾಫಿ ಹಾಗೂ 25 ಎಂಜಿಪ್ಲಾಸ್ಟಿ ನೆರವೇರಿಸಲು ಆದ್ಯತೆ ನೀಡಲಾಗುವದು.
ರೋಗಿಗಳು ಕಡಿಮೆ (low BP) ರಕ್ತದೊತ್ತಡ ಕಿಡ್ನಿ, ಲೀವರ ಹಾಗೂ ನರರೋಗದಿಂದ ಬಳಲುತ್ತಿರಬಾರದು. ಅವಶ್ಯವಿರುವ ರೋಗಿಗಳಿಗೆ ಕೇವಲ 1 ಸ್ಟೆಂಟ ಮಾತ್ರ ಅಳವಡಿಸಲಾಗುವದು. ಹೃದಯದಲ್ಲಿ ಒಂದಕ್ಕಿಂತ ಹೆಚ್ಚು ಬ್ಲಾಕ್ ಗಳಿದ್ದರೆ ಅವರಿಗೆ ಸ್ಟೆಂಟ ಹಾಕಲಾಗುವುದಿಲ್ಲ ಎಂದು ತಿಳಿಸಿದರು.
ಆಧಾರ ಕಾರ್ಡ, ರೇಶನ್ ಕಾರ್ಡ, ಪ್ಯಾನ ಕಾರ್ಡ, ಆಭಾ ಕಾರ್ಡ ಕಡ್ಡಾಯ. ಈ ಯೋಜನೆಯೊಂದಿಗೆ ಯಾವುದೇ ಆರೋಗ್ಯ ಯೋಜನೆ, ವಿಮಾ ಯೋಜನೆಗಳನ್ನು ಇದರಲ್ಲಿ ಸೇರಿಸಲಾಗುವುದಿಲ್ಲ. ವೈದ್ಯಕೀಯ ದಾಖಲೆಗಳನ್ನು ಕಾಗದದಲ್ಲಿ ಮಾತ್ರ ನೀಡಲಾಗುತ್ತದೆ.
ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಹೃದ್ರೋಗಕ್ಕೆ ಸಮಗ್ರ ಮತ್ತು ಸುಸಜ್ಜಿತವಾದ ಚಿಕಿತ್ಸೆ ನೀಡುವದಕ್ಕಾಗಿ 1997ರಲ್ಲಿ ಅತ್ಯಂತ ಅನುಭವಿ ತಜ್ಞವೈದ್ಯರ ಮೂಲಕ ಹೃದ್ರೋಗ ವಿಭಾಗವನ್ನು ಪ್ರಾರಂಭಿಸಿದರೆ, 2000ರಲ್ಲಿ ಕ್ಯಾಥಲ್ಯಾಬ್ ಅನ್ನು ಅಳವಡಿಸಿ ಹೃದಯರೋಗ ಚಿಕಿತ್ಸಾ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಇಲ್ಲಿಯವರೆಗೆ ಸುಮಾರು 1.50 ಲಕ್ಷ ಎಂಜಿಯೋಗ್ರಾಪಿ ಹಾಗೂ ಎಂಜಿಯೋಪ್ಲಾಸ್ಟಿ ನೆರವೇರಿಸಲಾಗಿದೆ. ಈ ಭಾಗದಲ್ಲಿ ಅತೀ ಹೆಚ್ಚು ಜನರ ಹೃದಯಕ್ಕೆ ಚಿಕಿತ್ಸೆ ನೀಡಿರುವದು ನಮ್ಮ ಹೆಗ್ಗಳಿಕೆ.
ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ಜನ್ಮ ದಿನಾಚರಣೆ ಅಂಗವಾಗಿ ಆಸ್ಪತ್ರೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣಾ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ (ಕರ್ನಲ್) ದಯಾನಂದ, ಹೃದಯರೋಗ ವಿಭಾಗ ಮುಖ್ಯಸ್ಥರಾದ ಡಾ. ಸಂಜಯ ಪೋರವಾಲ್, ಹಿರಿಯ ಹೃದ್ರೋಗ ತಜ್ಞವೈದ್ಯರಾದ ಡಾ. ಸುರೇಶ ವಿ ಪಟ್ಟೇದ, ಡಾ. ಆರ್ ಬಿ ನೇರ್ಲಿ (ಡೈರೆಕ್ಟರ, ಕ್ಲಿನಿಕಲ್ ಸರ್ವಿಸ್) ಡಾ. ರಾಜಶೇಖರ ಸೋಮನಟ್ಟಿ,ಡಾ. ಸಮೀರ ಅಂಬರ, ಡಾ. ಪ್ರಸಾದ ಎಂ.ಆರ್., ಡಾ. ವಿಶ್ವನಾಥ ಹೆಸರೂರ ಉಪಸ್ಥಿತರಿದ್ದರು.