23/12/2024
IMG-20240717-WA0025

ನದಿಪಾತ್ರಗಳಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ: ಪ್ರವಾಹ ನಿರ್ವಹಣೆ ಸಿದ್ಧತೆ ಪರಿಶೀಲನೆ

ಬೆಳಗಾವಿ-17: ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ವಿವಿಧೆಡೆ ಭೇಟಿ ನೀಡಿ ಘಟಪ್ರಭಾ, ಕೃಷ್ಣಾ ಹಾಗೂ ಹಿರಣ್ಯಕೇಶಿ ನದಿಪಾತ್ರದ ವಿವಿಧ ಪ್ರದೇಶಗಳನ್ನು ಪರಿಶೀಲಿಸಿದರು.

ಸುತಗಟ್ಟಿ ಬಳಿ ಘಟಪ್ರಭಾ ನದಿಯ ಸೇತುವೆ ಬಳಿ ನದಿಯ‌ ಒಳಹರಿವು ಪ್ರಮಾಣ ಹಾಗೂ ಪ್ರಸ್ತುತ ನೀರಿನ ಪ್ರಮಾಣದ ಬಗ್ಗೆ ಅಧಿಕಾರಿಗಳಿಂದ‌ ಮಾಹಿತಿಯನ್ನು ಪಡೆದುಕೊಂಡರು.

ಇದಾದ ನಂತರ ಸಂಕೇಶ್ವರ ಪಟ್ಟಣಕ್ಕೆ‌ ತೆರಳಿದ ಅವರು, ಸಂಭವನೀಯ ಪ್ರವಾಹದಿಂದ ಬಾಧಿತಗೊಳ್ಳಬಹುದಾದ ಪ್ರದೇಶಗಳನ್ನು ವೀಕ್ಷಿಸಿದರು.
ಕಳೆದ ಬಾರಿ ಪ್ರವಾಹ ಬಂದಾಗ‌ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಅವರು, ಸಂಭವನೀಯ ಪ್ರವಾಹ ನಿರ್ವಹಣೆಗೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಹಶೀಲ್ದಾರರು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮೊಹಮ್ಮದ್ ರೋಷನ್ ಅವರು ನಿರ್ದೇಶನ ನೀಡಿದರು.
ಕೆಳಹಂತದಲ್ಲಿರುವ ಸೇತುವೆಗಳು ಮುಳುಗಡೆಯಾದಾಗ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಜನರು ದಾಟದಂತೆ ಬ್ಯಾರಿಕೇಡ್ ಹಾಕಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

2019 ರ ಪ್ರವಾಹ ಸಂದರ್ಭದಲ್ಲಿ ಸ್ಥಾಪಿಸಲಾಗಿದ್ದ‌ ಕಾಳಜಿ ಕೇಂದ್ರಗಳಂತೆ ಈ ಬಾರಿಯೂ ಈಗಾಗಲೇ ಕಾಳಜಿ ಕೇಂದ್ರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿರುತ್ತದೆ ಎಂದು ಹುಕ್ಕೇರಿ ತಹಶೀಲ್ದಾರ ಮಂಜುಳಾ ನಾಯಕ ವಿವರಿಸಿದರು.

ಚಿಕ್ಕೋಡಿ ತಾಲ್ಲೂಕಿನ ಮಾಂಜರಿ‌ಯ ಸೇತುವೆ ಬಳಿ ಕೃಷ್ಣಾ‌ ನದಿಯ ಒಳಹರಿವು ವೀಕ್ಷಿಸಿದರು. ನಂತರ ಯಡೂರ ಗ್ರಾಮದ ಬಳಿ ಬೋಟ್ ಮೂಲಕ ಕೃಷ್ಣಾ ನದಿಯಲ್ಲಿ ಸಂಚರಿಸಿದ ಜಿಲ್ಲಾಧಿಕಾರಿಗಳು, ತುರ್ತು ಸಂದರ್ಭದಲ್ಲಿ ಜನರು ಮತ್ತು ಜಾನುವಾರುಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ನೆರೆಯ ಮಹಾರಾಷ್ಟ್ರದಲ್ಲಿ ವ್ಯಾಪಕ‌ ಮಳೆಯಾಗುತ್ತಿದ್ದು, ಅದೇ ರೀತಿ ಜಿಲ್ಲೆಯಲ್ಲಿಯೂ ಹಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ಸದಾ ಎಚ್ಚರಿಕೆ ವಹಿಸಬೇಕು.
ನದಿಯ ಒಳ ಹರಿವಿನ ಮೇಲೆ ನಿರಂತರ ನಿಗಾ ವಹಿಸವುದರ ಜತೆಗೆ ತುರ್ತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಬೋಟ್ ಗಳು ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ಪ್ರವಾಹ ಭೀತಿ:

ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ‌ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಸದ್ಯಕ್ಕೆ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ‌ಉದ್ಭವಿಸಿಲ್ಲ; ಆದಾಗ್ಯೂ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಈಗಾಗಲೇ 26 ಬೋಟ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಅಗತ್ಯಬಿದ್ದರೆ ಹೆಚ್ಚುವರಿ ಬೋಟ್ ಗಳನ್ನು ಕಾರವಾರದಿಂದ ತರಿಸಲಾಗುವುದು ಎಂದು ಹೇಳಿದರು.

ಚಿಕ್ಕೋಡಿ ಉಪ ವಿಭಾಗಾಧಿಕಾರಿ ಬಸವರಾಜ ಸಂಪಗಾವಿ, ತಹಶೀಲ್ದಾರ ಕುಲಕರ್ಣಿ ಸೇರಿದಂತೆ ಕಂದಾಯ‌ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

error: Content is protected !!