ಬೆಂಗಳೂರಿನ ಕೇಂದ್ರ ಮಹಾಸಭೆ ಸಮಿತಿಯು ಜುಲೈ 21 ರಂದು ಚುನಾವಣೆಯ ದಿನಾಂಕವನ್ನು ನಿರ್ಧರಿಸಿತ್ತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶ್ರೀಮತಿ ರತ್ನಪ್ರಭಾ ಬೆಲ್ಲದ ಅವರು ಆ ಪೂರ್ವದಲ್ಲಿಯೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಸಹಾಯಕ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇತರ 26 ಸದಸ್ಯರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಮ್ಮ ಕ್ರಿಯಾಶೀಲ ವ್ಯಕ್ತಿತ್ತದಿಂದ ಕಳೆದ ಐದು ವರ್ಷಗಳಿಂದ ಶ್ರೀಮತಿ ರತ್ನಪ್ರಭಾ ಬೆಲ್ಲದ ಅವರು ಜಿಲ್ಲಾ ಘಟಕದಲ್ಲಿ ಹಲವಾರು ಮಹತ್ವಪೂರ್ಣ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಕೇಂದ್ರ ಮಹಾಸಭೆಯ ಉಪಾಧ್ಯಕ್ಷರಾಗಿರುವ ಡಾ.ಪ್ರಭಾಕರ ಕೋರೆಯವರ ಮಾರ್ಗದರ್ಶನ ಹಾಗೂ ಇತರ ಸದಸ್ಯರ ಸಹಕಾರದಿಂದ ಬೆಳಗಾವಿ ಹೃದಯ ಭಾಗವಾದ ಸುಭಾಷ ನಗರದಲ್ಲಿ ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಉಚಿತ ವಸತಿ ನಿಲಯ ನಿರ್ಮಿಸುವಲ್ಲಿ, ಗೋವಾವೇಸ್ ಸರ್ಕಲ್‍ನಲ್ಲಿ ಬಸವಣ್ಣನವರ ಕಂಚಿ ಮೂರ್ತಿ ನಿರ್ಮಾಣದಲ್ಲಿ, ಪ್ರತಿಮಾಸ ಲಿಂಗಾಯತ ಭವನದಲ್ಲಿ ಅಮವಾಸ್ಯೆ ಅನುಭಾವ ಗೋಷ್ಠಿಗಳನ್ನು ಜರುಗಿಸುವಲ್ಲಿ, ಸಮಾಜಕ್ಕಾಗಿ ಕಣಬರ್ಗಿಯಲ್ಲಿ ರುದ್ರಭೂಮಿಯನ್ನು ತರುವಲ್ಲಿ, ತಾಲೂಕಾ ಘಟಕಗಳಲ್ಲಿ ಬಸವ ತತ್ತ್ವ ಪ್ರಸಾರ ಸಭೆಗಳನ್ನು ಸಂಘಟಿಸುವಲ್ಲಿ ಹಾಗೂ ಸಮಾಜದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಗಳನ್ನು ನಿರಂತರವಾಗಿ ಜರುಗಿಸುವಲ್ಲಿ ರತ್ನಪ್ರಭಾ ಬೆಲ್ಲದ ಅವರ ಕೊಡುಗೆ ಅನನ್ಯ ಹಾಗೂ ಅನುಪಮವೆನಿಸಿದೆ. ಇದೆಲ್ಲದರ ಫಲಶ್ರುತಿಯೆಂಬ ಬೆಳಗಾವಿ ಜಿಲ್ಲಾ ಘಟಕಕ್ಕೆ ಅವರು ಅವಿರೋಧವಾಗಿ ಪುನರಾಯ್ಕೆಯಾಗಿರುವುದು ಹೆಮ್ಮೆ ತಂದಿದೆ. ಅವರಿಗೆ ಡಾ.ಪ್ರಭಾಕರ ಕೋರೆಯವರು, ಕೇಂದ್ರ ಘಟಕದ ಪದಾಧಿಕಾರಿಗಳು, ಜಿಲ್ಲಾ ಸಮಾಜದ ಹಿರಿಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.