23/12/2024
IMG-20240707-WA0002
ಪತ್ರಕರ್ತರು ಆಧುನಿಕ ಸಮಾಜದ ಕನ್ನಡಿ: ಶಾಸಕ ರಾಜು (ಆಸಿಫ್) ಸೇಠ್

ಬೆಳಗಾವಿ-07: ತಂತ್ರಜ್ಞಾನ ಬೆಳವಣಿಗೆಯಿಂದ ಸುದ್ದಿಗಳ ಹರಿವು ಹೆಚ್ಚಾಗಿವೆ. ಪತ್ರಕರ್ತರು ಸುದ್ದಿಯ ವಾಸ್ತವ ಅಂಶವನ್ನು ಗುರುತಿಸಿ ಪ್ರಕಟಿಸುವ ಮೂಲಕ ಸಾಮಾಜಿಕ ಕಳಕಳಿ ಹೊಂದಬೇಕು. ಪತ್ರಕರ್ತರು ಸಮಾಜದ ಕನ್ನಡಿಯಿದ್ದಂತೆ ಜನತೆಗೆ ವರದಿ ನೀಡುವ ಮೂಲಕ ಅವರಲ್ಲಿ ಒಂದು ರೀತಿಯ ಜನಾಭಿಪ್ರಾಯ ಮೂಡಿಸಬಹುದು ಹಾಗಾಗಿ ಪತ್ರಿಕೋದ್ಯಮವನ್ನು ಸಮಾಜದ ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ ಎಂದು ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ರಾಜು (ಆಸಿಫ್) ಸೇಠ ಅವರು ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿ ಜಿಲ್ಲಾ ಘಟಕ  ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನೆಹರು ನಗರದ ಕನ್ನಡ ಭವನದಲ್ಲಿ ರವಿವಾರ  ನಡೆದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಪತ್ರಿಕೋದ್ಯಮವನ್ನು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ತೆಗೆದುಕೊಂಡು ಹೋಗುವುದು ಮುಖ್ಯವಾಗುತ್ತೆ. ಪತ್ರಕರ್ತರ ವರದಿಯಿಂದ ಜನರ ಮನೋಭಾವನೆ, ವಿಚಾರಗಳು ಬದಲಾಗುತ್ತವೆ. ಪಾರದರ್ಶಕ ವರದಿಯ ಮೂಲಕ ಜನೆತೆಗೆ ಸತ್ಯಾಂಶವನ್ನು ತಿಳಿಸಿಕೊಡಬೇಕು. ಸತ್ಯ, ಸುಳ್ಳುಗಳನ್ನು ಪರಿಶೀಲಿಸಿ ವರದಿಗೆ ಮುಂದಾಗಬೇಕು ಎಂದು ಶಾಸಕ ರಾಜು ಆಸೀಫ್ ಸೇಠ ಅವರು ತಿಳಿಸಿದರು.

ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಸರಜೂ ಕಾಟ್ಕರ್ ಅವರು ಮಾತನಾಡಿ, 1843 ರಲ್ಲಿ ಕರ್ನಾಟಕದಲ್ಲಿ ಮೊಟ್ಟ ಮೊದಲಬಾರಿಗೆ ಜರ್ಮನ್ ದೇಶದ ಫಾದರ್ ಹರ್ಮನ್ ಮೊಗ್ಲಿಂಗ ಅವರು ಕನ್ನಡ ಕಲಿತು ಜನರಿಗೆ ಸಂದೇಶ, ಮಾಹಿತಿ ತಿಳಿಸಲು ಬಳ್ಳಾರಿಯಲ್ಲಿ ಕೈಬರಹದಲ್ಲಿ ಕನ್ನಡ  ಸಮಾಚಾರ ಎಂಬ ಪತ್ರಿಕೆ ಪ್ರಾರಂಭಿಸಿದರು.

ಬಳಿಕ ಮಂಗಳೂರಿನಲ್ಲಿ ಅವರು 1843 ರ ಜುಲೈ 1 ರಂದು ಮಂಗಳೂರು ಸಮಾಚಾರ ಎಂಬ ಮುದ್ರಿತ ದಿನಪತ್ರಿಕೆ ಪ್ರಾರಂಭಿಸಿದರು. ಹಾಗಾಗಿ ದಾಖಲೆಗಳ ಪ್ರಕಾರ ಮಂಗಳೂರು ಸಮಾಚಾರ ಪತ್ರಿಕೆಯನ್ನು ಕನ್ನಡದ ಮೊಟ್ಟ ಮೊದಲು ಪತ್ರಿಕೆ ಎಂದು ಕರೆಯಲಾಗುತ್ತದೆ. ಮೊಗ್ಲಿಂಗ್ ಅವರು ಭಾಷೆ ಪ್ರಬುದ್ಧತೆಗೆ ಬರದ ಕಾಲದಲ್ಲಿ ಪತ್ರಿಕೆ ಆರಂಭಿಸಿದರು. ಈ ದಿನವನ್ನು ಪತ್ರಿಕಾ ದಿನಾಚರಣೆ ಎಂದು ಆಚರಿಸಲಾಗುತ್ತದೆ ಎಂದು ಕರ್ನಾಟಕದಲ್ಲಿ ಪತ್ರಿಕೋದ್ಯಮ ಉಗಮದ ಬಗ್ಗೆ ಮಾಹಿತಿ ನೀಡಿದರು.

ಬಹಳಷ್ಟು ಜನ ಪತ್ರಕರ್ತರು ಸ್ವಂತ ಮನೆಯಿಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಈಗಿರುವ ಕುವೆಂಪು ನಗರದಲ್ಲಿ ಸುಮಾರು 20 ವರ್ಷಗಳ ಹಿಂದೆ ಪತ್ರಕರ್ತರಿಗೆ ನಿವೇಶನಗಳನ್ನು ನೀಡಲಾಗಿತ್ತು. ಅದರಂತೆ ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ನಿವೇಶನ ಮಂಜೂರು ಮಾಡುವ ನಿಟ್ಟಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಪ್ರಯತ್ನಿಸಬೇಕು ಎಂದು ಸಾಹಿತಿ ಸರಜೂ ಕಾಟ್ಕರ್ ಅವರು ಸಲಹೆ  ನೀಡಿದರು.

ಗೋಕಾಕ್ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಅವರು ಮಾತನಾಡಿ ಯಾವುದೇ ವರದಿ ಇದ್ದರೂ ಹಿಂಜರಿಯದೆ ನೇರವಾಗಿ ವರದಿಗಳನ್ನು ಮಾಡಬೇಕು. ಸಮಾಜದಲ್ಲಿ ಪತ್ರಕರ್ತರಿಗೆ ನಿಂದನೆ ಸಹಜ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕು. ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕಾರ್ಯನಿರತ ಪತ್ರಕರ್ತ ಸಂಘಟನೆ ಸದಾ ಬೆಂಬಲವಾಗಿ ನಿಂತಿದೆ ಎಂದು ಬೆಂಬಲ ಸೂಚಿಸಿದರು.

ಡಿಸಿಪಿ ರೋಹನ್ ಜಗದೀಶ್ ಅವರು ಮಾತನಾಡಿ, ಸಮಾಜದ ಬೆಳವಣಿಗೆಗೆ ಪೊಲೀಸ್ ಇಲಾಖೆ ಹಾಗೂ ಪತ್ರಕರ್ತರ ಸಹಭಾಗಿತ್ವ ತುಂಬಾ ಮುಖ್ಯ. ಪತ್ರಿಕೋದ್ಯಮ ನಮ್ಮ ದೇಶದ ನಾಲ್ಕನೇ ಸ್ಥಂಬವಾಗಿ ಕಾರ್ಯ ನಿರ್ವಹಿಸುತ್ತಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ನಿಮ್ಮೆಲ್ಲರ ಸಹಕಾರ ತುಂಬಾ ಅಗತ್ಯ ಎಂದು ಪ್ರಶಂಸಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ ಅವರು ಮಾತನಾಡಿ, ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಎಲ್ಲೇ ನಡೆಯಲಿ ಮೊದಲು ಚರ್ಚೆಯಾಗುತ್ತಿರೋದು ವೃತ್ತಿ ಧರ್ಮ ಪಾಲನೆ,  ನೈತಿಕತೆ ಬಗ್ಗೆ. ಈಗಾಗಲೇ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. ಒಂದು ಕಾಲದಲ್ಲಿ ಕೈ ಬರಹ ಪತ್ರಿಕೆಗಳಿದ್ದವು, ನಂತರ ಪತ್ರಿಕೆಗಳು, ಟಿವಿ ಚಾನೆಲ್ ಗಳು ಬಂದವು. ಈಗೀಗ ಸಾಮಾಜಿಕ ಜಾಲತಾಣಗಳಿಂದ  ಪತ್ರಿಕೋದ್ಯಮದ ಸ್ವರೂಪ ಬದಲಾಗುತ್ತಿದೆ ಎಂದರು.

ಪತ್ರಿಕೋದ್ಯಮ ಸ್ವರೂಪ ಬದಲಾಗುತ್ತಿರುವುದನ್ನು ಗಮನಿಸಿ ನಮ್ಮ ವಿಚಾರಗಳನ್ನು ನಮ್ಮ ಕಾರ್ಯಕ್ಷಮತೆಯನ್ನು ಬದಲಾಯಿಸಿಕೊಂಡು ತಂತ್ರಜ್ಞಾನದ ಬಳಕೆಯೊಂದಿಗೆ ಎಲ್ಲರೂ ಯಶಸ್ವಿ ಪತ್ರಕರ್ತರಾಗಿ ಮುನ್ನಡೆಯೋಣ ಎಂದು ಹೇಳಿದರು.

ಪತ್ರಕರ್ತರಿಗೆ ತಂತ್ರಜ್ಞಾನ ಅಳವಡಿಕೆ, ತರಬೇತಿ ನೀಡುವುದು. ಪತ್ರಕರ್ತರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಹಾಗೂ ಖಾಸಗಿ ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಕುರಿತು ಹಾಗೂ

ಕಾಲಕ್ಕೆ ತಕ್ಕಂತೆ ಪತ್ರಕರ್ತರು ಇಂದಿನ ಡಿಜಿಟಲ್ ಮಾದ್ಯಮದಲ್ಲಿ ಹೇಗೆ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ್ ಕುರಂದವಾಡಿ ಅವರು ಆಶಯನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ ಮೀನಾ ಅವರು, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಿಕೋದ್ಯಮ ಪಾತ್ರ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಿಭಾ ಪುರಸ್ಕಾರ:

ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತೆ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಮನೀಷಾ ಸುಬೇದಾರ್, ಸುಭಾಸ್ ಕುಲಕರ್ಣಿ, ಎಂ.ಕೆ.ಹೆಗಡೆ, ಮುನ್ನಾ‌ ಬಾಗವಾನ್, ಬ್ರಹ್ಮಾನಂದ ಹಡಗಲಿ, ಸುರೇಶ್ ಶನಭೋಗ ಅವರನ್ನು ಸನ್ಮಾನಿಸಲಾಯಿತು.

ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು, ಪತ್ರಕರ್ತರ ಕುಟುಂಬ ವರ್ಗದವರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!