ಬೆಳಗಾವಿ-೨೧ : ವಿದ್ಯಾರ್ಥಿಗಳು ಕಾನೂನನ್ನು ಜನಸಾಮಾನ್ಯರ ಹಿತದೃಷ್ಟಿಯಿಂದ ಅರ್ಥ ಮಾಡಿಕೊಂಡು ಅಧ್ಯಯನ ನಡೆಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎ.ಎಸ್. ಪಾಶ್ಚಾಪುರೆ ಹೇಳಿದರು.ಗುರುವಾರ ನಗರದ ಕೆಎಲ್ ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯ ಮತ್ತು ಖಾನಾಪುರದ ಪೆÇಲೀಸ್ ತರಬೇತಿ ಶಾಲೆಯ ವತಿಯಿಂದ ಆರ್. ಎಲ್. ಎಸ್. ಮಹಾವಿದ್ಯಾಲಯದ ಸರ್ ಸಿ.ವಿ. ರಾಮನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಹೊಸ ಅಪರಾಧಿಕ ಕಾನೂನುಗಳು: ಮುಂದಿನ ಸವಾಲುಗಳು’ ಎಂಬ ವಿಷಯದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಾನೂನು ಜನಸಾಮಾನ್ಯರಿಗೆ ನ್ಯಾಯ ಒದಗಿಸುವಂತಿರಬೇಕು. ವಿದ್ಯಾರ್ಥಿಗಳು ಓದುವ ಹಂತದಲ್ಲಿಯೇ ಸಾಮಾಜಿಕ ಅವಶ್ಯಕತೆ ಅರಿತುಕೊಂಡು, ಆಳವಾಗಿ ಕಾನೂನು ಅಧ್ಯಯನ ಮಾಡಬೇಕು. ಸಮಾಜದಲ್ಲಿ ಹೆಚ್ಚಿನ ಜವಾಬ್ದಾರಿ ಹೊಂದಿರುವ ಕಾನೂನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡು ಧರ್ಮದ ಹಾದಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು. ಈ ಮೂಲಕ ಸಮಾಜಕ್ಕೆ ಶ್ರೇಷ್ಠ ಕೊಡುಗೆ ನೀಡುವಂತಾಗಬೇಕು ಎಂದು ಅವರು ಕಿವಿಮಾತು ಹೇಳಿದರು.
ಪ್ರತಿಯೊಬ್ಬರು ಭ್ರμÁ್ಟಚಾರರಹಿತ, ಮದ-ಮತ್ಸರ ಮುಂತಾದ ಕೆಟ್ಟ ಭಾವನೆಗಳನ್ನು ಬಿಟ್ಟು ಧರ್ಮದ ಹಾದಿಯಲ್ಲಿ ಬದುಕು ಕಟ್ಟಿಕೊಂಡರೆ ಉತ್ತಮ ಸಮಾಜವನ್ನು ನಿರ್ಮಿಸಬಹುದಾಗಿದೆ ಎಂದು ಹೇಳಿದರು. ಇದುವರೆಗೆ 1860 ಇಂಡಿಯನ್ ಪಿನಲ್ ಕೋಡ್ ಇತ್ತು. ಆದರೆ, ಇಂದು ಭಾರತೀಯ ನ್ಯಾಯ ಸಂಹಿತೆ, ನಾಗರಿಕ ಸುರಕ್ಷತಾ ಕಾನೂನು ಎಂಬ ಕಾನೂನು ಜಾರಿಗೆ ತರಲಾಗಿದೆ. ಭಾರತೀಯ ನ್ಯಾಯ ಸಂಹಿತೆ ಇದು ಹೊಸತನ ಹೊಂದಿರುವ ಕಾನೂನು. ಭಾರತ ಹಾಗೂ ಇಂಡಿಯಾ ಎಂದರೆ ನಮ್ಮ ಕಣ್ಣೆದುರು ವಿಭಿನ್ನ ಅರ್ಥಗಳೇ ಬರುತ್ತದೆ. ‘ಭಾರತ’ ಅಂದರೆ ಸತ್ಯಯುಗದಿಂದ ಹಿಡಿದು ಅಧ್ಯಾತ್ಮಿಕ ಸೇರಿದಂತೆ ಎಲ್ಲವೂ ಬರುತ್ತಿದೆ. ಆದರೆ, ‘ಇಂಡಿಯಾ’ ಎಂದರೆ ನಮಗೆ ಕೇವಲ 200 ವರ್ಷಗಳ ಇತಿಹಾಸ ಮಾತ್ರ ದೊರೆಯುತ್ತದೆ. ಜಗತ್ತಿನಲ್ಲೇ ಅದ್ಭುತ ದೇಶ ಎಂದರೆ ಅದು ನಮ್ಮ ಭಾರತ. ನಮ್ಮ ದೇಶಕ್ಕೆ ಬಹು ಪ್ರಾಚೀನ ಇತಿಹಾಸ ಇದೆ. ನೀವೆಲ್ಲರೂ ಭವಿಷ್ಯದಲ್ಲಿ ಶ್ರೇಷ್ಠ ನ್ಯಾಯಾಧೀಶರು, ವಕೀಲರಾಗಿ ಹೊರಹೊಮ್ಮಿ ಎಂದು ಅವರು ಹೇಳಿದರು.
ಬೆಳಗಾವಿಯ ವೃತ್ತ ಪೆÇಲೀಸ್ ನಿರೀಕ್ಷಕ ಎಸ್.ಬಿ.ಮದಿಹಳ್ಳಿ ಮಾತನಾಡಿ, ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕಾನೂನು ಅರಿವು ಹೊಂದುವುದು ಬಹಳ ಅವಶ್ಯಕವಾಗಿದೆ. ಪ್ರಸ್ತುತ ಹೊಸ ಅಪರಾಧಿಕ ಕಾನೂನುಗಳು ಭಾರತದ ಮೂಲ ಆಧ್ಯಾತ್ಮಿಕ ತತ್ವಗಳು, ದಾರ್ಶನಿಕರು ಹಾಗೂ ಸಂತರ ಆಶೋತ್ತರಗಳನ್ನು ಒಳಗೊಂಡಿದೆ ಎಂದರು.
ಕೆಎಲ್ ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಮಾತನಾಡಿ, ಕೆಎಲ್ ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯ ನಿರಂತರವಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಾರ್ಯಾಗಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಜ್ಯೋತಿ ಜಿ. ಹಿರೇಮಠ, ಧಾರವಾಡದ ನಿವೃತ್ತ ಡಿಎಸ್ ಪಿ ಜಿ.ಜಿ. ಮರಿಬಶೆಟ್ಟಿ, ಹಾಸನ ಜಿಲ್ಲೆ ಹೊಳೆನರಸಿಪುರ ಸರ್ಕಾರಿ ಕಾನೂನು ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಎಂ.ಕೆ.ಮಾಟೊಳ್ಳಿ, ಹುಬ್ಬಳ್ಳಿಯ ನಿವೃತ್ತ ಸಾರ್ವಜನಿಕ ಅಭಿಯೋಜಕ ಎ.ಎಂ.ಹೊಸಮನಿ ಅವರು ವಿವಿಧ ಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸುನಂದಾ ಪಾಟೀಲ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯೆ ಡಾ.ಜ್ಯೋತಿ ಜಿ.ಹಿರೇಮಠ ಸ್ವಾಗತಿಸಿದರು. ಡಾ.ಸುಪ್ರಿಯಾ ಸ್ವಾಮಿ ಪರಿಚಯಿಸಿದರು. ಡಾ.ಅಶ್ವಿನಿ ಹಿರೇಮಠ ವಂದಿಸಿದರು. ಕುಮಾರಿ ಪ್ರೇರಣಾ ನಿರೂಪಿಸಿದರು.