ಬೆಳಗಾವಿ-೨೧: ಮಗುವಿನ ಹುಟ್ಟುಹಬ್ಬದ ನಿಮಿತ್ತ 200 ಮಂದಿಗೆ ಆರ್ಡರ್ ಮಾಡಿದ ಬಿರಿಯಾನಿ ನಿಗದಿತ ಸಮಯಕ್ಕೆ ಬಾರದೆ ಇದ್ದ ಕಾರಣಕ್ಕೆ ಗಾಂಧಿ ನಗರದಲ್ಲಿ ಮಾರಾಮಾರಿ ನಡೆದಿದೆ.
ಈ ಬಗ್ಗೆ ಮಾಹಿತಿ ಏನೆಂದರೆ ಯಮನಾಪುರದ ಸಚಿನ್ ದಡ್ಡಿ ಎಂಬುವರು ತಮ್ಮ ಮಗನ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದರು. ಗಾಂಧಿನಗರದ ಸಲೀಂ ನದಾಫ್ ಎಂಬುವವರಿಗೆ 200 ಮಂದಿಗೆ ಸಾಕಾಗುವಷ್ಟು ಬಿರಿಯಾನಿ ಕೊಡಿಸಲು ಆರ್ಡರ್ ನೀಡಿದ್ದರು. ರಾತ್ರಿ 8 ಗಂಟೆಯವರೆಗೆ ಬಿರಿಯಾನಿ ನೀಡುವುದಾಗಿ ಹೇಳಲಾಗಿತ್ತು ಆದರೆ ರಾತ್ರಿ 11 ಗಂಟೆಯವರೆಗೆ ಬಿರಿಯಾನಿ ನೀಡದ ಕಾರಣ ಸಚಿನ್ ದಡ್ಡಿ ತನ್ನ ಇಬ್ಬರು ಸ್ನೇಹಿತರಾದ ಅಮೃತ್ ಗಸ್ತಿ ಮತ್ತು ಬಲರಾಜ್ ಹಳಬಲ್ ಅವರನ್ನು ಗಾಂಧಿ ನಗರಕ್ಕೆ ಕಳುಹಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಮಾರಾಮಾರಿ ನಡೆದು ಮುಸ್ತಾಕ್ ಸೈಯದ್ ಹಾಗೂ ಅಫ್ಜಲ್ ಸೈಯದ್ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಾಳಮಾರುತಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.