ಬೆಳಗಾವಿ-೧೫:ಅತ್ಯಂತ ಕಠಿಣ ಮತ್ತು ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ತೀವ್ರವಾಗಿರುತ್ತದೆ. ನಮ್ಮ ಕುಟುಂಬ ಅಥವಾ ನಮಗೆ ತುರ್ತಾಗಿ ರಕ್ತದ ಅವಶ್ಯಕತೆ ಇದ್ದಾಗ ಅದರ ಮಹತ್ವ ನಮಗೆ ಅರಿವಿಗೆ ಬರುತ್ತದೆ. ರಕ್ತದ ಕೊರತೆ ತೀವ್ರವಾಗಿದ್ದು, ದಾನಿಗಳು ರಕ್ತವನ್ನು ನೀಡಲು ಮುಂದೆ ಬರಬೇಕು ಎಂದು ಸಮಾಜ ಸೇವಕರಾದ ಅನಿಲ ಚೌದರಿ ಅವರಿಂದಿಲ್ಲಿ ಹೇಳಿದರು.
ಕೆಎಲ್‌ಇ ಸಂಸ್ಥೆಯ ಡಾ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ಬಿ ಎಮ್ ಕಂಕಣವಾಡಿ ಆಯುರ್ವೇದಿಕ್ ಮಹಾವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ನಗರದ ವಿವಿಧ ಭಾಗಗಳಲ್ಲಿ ಏರ್ಪಡಿಸಲಾಗಿದ್ದ ಬೀದಿ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ಮಕ್ಕಳಲ್ಲಿ ರಕ್ತದ ಉತ್ಪಾದನೆಯಾಗುವುದಿಲ್ಲ. ಅಂತ ಮಕ್ಕಳಿಗೆ ನಿರಂತರವಾಗಿ ರಕ್ತ ನೀಡಬೇಕಾಗುತ್ತದೆ. ಆದ್ದರಿಂದ ರಕ್ತದ ಕೊರತೆಯನ್ನು ನೀಗಿಸುವಲ್ಲಿ ಸಮದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ತೀವ್ರವಾಗಿರುತ್ತದೆ. ಅಗತ್ಯಕ್ಕೆ ತಂಕ್ಕಂತೆ ರಕ್ತದ ಲಭ್ಯತೆ ಇಲದಿದ್ದಾಗ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು.
ಬಿ ಎಂ ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಡಾ. ಮಹಾಂತೇಶ ರಾಮಣ್ಣವರ ಅವರು ಮಾತನಾಡಿ, ರಕ್ತದಾನ ಮಾಡಿದ ರಕ್ತದಾನಿಗಳಿಗೆ ಧನ್ಯವಾದಗಳು ಎಂಬ ಘೋಷವಾಕ್ಯದಡಿ ಈ ವರ್ಷವನ್ನು ಆಚರಿಸಲಾಗುತ್ತಿದೆ. ಅದರಂತೆ ರಕ್ತದಾನ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲಾಗುತ್ತಿದೆ ಎಂದರು.
ಕಾಲೇಜಿನ ಎನ್ ಎಸ್ ಎಸ್ ಘಟಕದ 2021 ಬ್ಯಾಚ್ನ ಶಿಬಿರಾರ್ಥಿಗಳಿಂದ “ಜನರಲ್ಲಿರುವ ರಕ್ತದಾನದ ಮೂಢನಂಬಿಕೆಯನ್ನು ತೆಗೆದುಹಾಕಲು ಬೀದಿ ನಾಟಕ ಮುಖಾಂತರ ಜನರಲ್ಲಿ ರಕ್ತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ ಪ್ರದರ್ಶಿಸಿದರು. ಕೆಎಲ್ಇ ಡಾ. ಪ್ರಭಾಕರ್ ಕೋರೆ ಆಸ್ಪತ್ರೆಯ ರಕ್ತ ಭಂಡಾರದ ಮುಖ್ಯಸ್ಥರಾದ ಡಾ ಶ್ರೀಕಾಂತ್ ವೀರಗೆ, ಡಾ ಸಂದೀಪ್ ಸಾಗರೆ, ಡಾ.ಪ್ರಶಾಂತ್ ತೋರಣಗಟ್ಟಿ ಡಾ.ಸಂದೀಪ ಕುರಾಡೆ, ಖಡೆ ಬಜಾರ್ ಪೊಲೀಸ್ ಠಾಣೆಯ ಆರ್ ಎಸ್ ನಾಯಕವಾಡಿ, ಧನರಾಜ್ ಎಲಿಗಾರ್, ಕಿಶೋರ್ ನಾರ್ಲೇಕರ್, ಶಿವರಾಜ್ ಪಾಟೀಲ್, ಶಿವಲಿಂಗ ಮಾದೇವಪ್ಪ ಕಿತ್ತೂರು, ನಾಗೇಶ್, ಪಾಲ್ಗೊಂಡಿದ್ದರು.