ಬೆಳಗಾವಿ ೧೭- ನಾನೊಬ್ಬ ಕಲಾವಿದನನಾಗಿದ್ದು ನಮ್ಮದು ಸಂಕಷ್ಟದ ಬದುಕಾಗಿದೆ. ಹಣಕಾಸಿನ ತೊಂದರೆಯೊಂದಿಗೆಯೇ ನಾವು ಜೀವನ ಸಾಗಿಸಬೇಕಾಗಿದೆ. ಸರ್ಕಾರದಿಂದ ಯಾವುದೇ ಸಹಾಯಧನ ದೊರೆಯುತ್ತಿಲ್ಲ. ಇದ್ದರೂ ಅದು ಕೇವಲ ಹಿರಿಯ ನಾಗರಿಕರಿಗೆ ಮಾತ್ರವಿದೆ. ಬೆಳೆಯುತ್ತಿರುವ ಏನನ್ನಾದರೂ ಸಾಧಿಸಬೇಕೆನ್ನುವ ಯವಕಲಾವಿದರತ್ತ ಸರ್ಕಾರ ಗಮನ ಹರಿಸಲಿ ಎಂದು ಖ್ಯಾತ ಹಾಸ್ಯ ಕಲಾವಿದ ಆನಂದ ಪತ್ತಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ರವರು ಕಲಾವಿದರ ಸಹಾಯಾರ್ಥವಾಗಿ ಇದೇ ದಿ. ೧೬ ರವಿವಾರ ಒಂದೇ ದಿನ ಮದ್ಯಾಹ್ನ ೩ ಹಾಗೂ ಸಾಯಂಕಾಲ ೬ ಗಂಟೆಗೆ ಎರಡು ಪ್ರದರ್ಶನಗಳನ್ನು ನಗರದ ಕನ್ನಡ ಭವನ ಸಂಯೋಜನೆಯಲ್ಲಿ ‘ಮುದುಕನ ಮದುವೆ’ ಹಾಸ್ಯ ನಾಟಕವನ್ನು ನೆಹರೂನಗರ ರಾಮದೇವ ಹೊಟೇಲ ಹತ್ತಿರವಿರುವ ಕನ್ನಡ ಭವನದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕ ಹಾಗೂ ಕಲಾವಿದರು ಪಡುತ್ತಿರುವ ಸಂಕಷ್ಟಗಳ ಕುರಿತು ಹಂಚಿಕೊಳ್ಳಲು ಮಾಧ್ಯಮಗೊಷ್ಠಿಯನ್ನು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದರು ಈ ಸಂದರ್ಭದಲ್ಲಿ ಆನಂದ ಪತ್ತಾರ ಮೇಲಿನಂತೆ ಹೇಳಿದರು.
ನಾವು ಆಗಾಗ ಕಲಾವಿದರ ಸಹಾಯಾರ್ಥವಾಗಿ ನಾಟಕಗಳ ಪ್ರದರ್ಶನವನ್ನು ಮಾಡಿ ಅದರಿಂದ ಬಂದಂತಹ ಹಣವನ್ನು ಕಲಾವಿದರ ಮಕ್ಕಳ ಶಿಕ್ಷಣಕ್ಕಾಗಿ, ತಂದೆ ತಾಯಿ ಹಿರಿಯರ ವೈದ್ಯಕೀಯ ಖರ್ಚಿಗಾಗಿ ಬಳಿಸುತ್ತೇವೆ. ಇದೇ ರೀತಿ ಈಗ ಪ್ರದರ್ಶನಗೊಳ್ಳುತ್ತಿರುವ ‘ಮುದುಕನ ಮದುವೆ’ ಸಹ ಕಲಾವಿದರ ಸಹಾಯಾರ್ಥ ನಾಟಕವಾಗಿದೆ. ರಂಗಭೂಮಿಯನ್ನೆ ನಂಬಿಕೊಂಡು ನಾವು ಬದುಕುತ್ತಿದ್ದೇವೆ. ಸಹಾಯಧನ ಎರಡು ನೂರು ರೂಪಾಯಿ ಇದ್ದು ಟಿಕೆಟ್ ಕೊಂಡು ನಾಟಕವನ್ನು ನೋಡಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಕೇಳಿಕೊಂಡರು.
ಕನ್ನಡ ಭವನದ ಯ. ರು. ಪಾಟೀಲ ಮಾತನಾಡಿ ಕನ್ನಡ ಭವನ ಸಾಹಿತ್ಯಿಕ, ಸಾಂಸ್ಕೃತಿಕ ಅದರಲ್ಲೂ ವಿಶೇಷವಾಗಿ ರಂಗಭೂಮಿಗಾಗಿ ಆಸರೆಯಾಗಿ ನಿಂತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷ ರಿಯಾಯತಿ ಬಾಡಿಗೆಯೊಂದಿಗೆ ನೀಡುತ್ತಿದೆ. ಗಡಿಭಾಗವಾದ ಬೆಳಗಾವಿಯಲ್ಲಿ ರಂಗಭೂಮಿ ಚಟುವಟಿಕೆಗಳು ಬೆಳೆಯಬೇಕು ಅದಕ್ಕಾಗಿ ಎಲ್ಲ ರೀತಿಯ ಸಹಕಾರವಿದೆ ಎಂದು ಹೇಳಿದರು.
ಹನುಮಂತಪ್ಪ ಬಾಗಲಕೋಟ, ಬಿ. ಎ. ಪಾಟೀಲ, ಯ.ರು. ಪಾಟೀಲ, ಆನಂದ ಪತ್ತಾರ ಮತ್ತು ಶ್ರೀಮತಿ ಹೇಮಾ ಪಾಟೀಲ ಹಾಜರಿದ್ದರು.