ಹಾಸ್ಯ ನಟರು ಹೀರೋಗಳಾಗಿ ಸಿನಿಮಾದಲ್ಲಿ ನಟಿಸುವುದು ಸಾಮಾನ್ಯವಾಗಿದೆ. ಟಿವಿ ಶೋಗಳು ಮತ್ತು ಚಲನಚಿತ್ರಗಳಲ್ಲಿ ಕಾಮಿಡಿ ಪಾತ್ರಗಳಿಗೆ ಹೆಸರಾಗಿದ್ದ ನಟ ಶಿವರಾಜ್ ಕೆಆರ್ ಪೇಟೆ ಅವರು 2020ರ ‘ನಾನು ಮತ್ತೆ ಗುಂಡ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಹೊಸ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಶಿವರಾಜ್ ತಮ್ಮ ಮುಂದಿನ ಸಿನಿಮಾಗಾಗಿ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ಹೊತ್ತಿರುವ ಶರತ್ ಚಕ್ರವರ್ತಿ ಅವರೊಂದಿಗೆ ಕೈಜೋಡಿಸುತ್ತಿದ್ದಾರೆ. ಅಯೋಗ್ಯ, ರೈಡರ್, ಮತ್ತು ನಾನು ಮತ್ತೆ ಗುಂಡ ಮುಂತಾದ ಚಿತ್ರಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದ ಶರತ್ ಇದೀಗ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಹೊಸ ಚಿತ್ರವನ್ನು ಶಿವರಾಜ್ ಅವರ ಹುಟ್ಟುಹಬ್ಬದಂದು ಮುಹೂರ್ತ ಸಮಾರಂಭದೊಂದಿಗೆ ಘೋಷಿಸಲಾಯಿತು.