ಬೆಂಗಳೂರು-೦೭: ದೇವರಾಜ ಅರಸು ಅವರು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿ ಈ ರಾಜ್ಯದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರು. ಅವರ ಹಾದಿಯಲ್ಲಿಯೇ ನಡೆಯುವ ಪ್ರಯತ್ನವನ್ನು ನಮ್ಮ ಸರ್ಕಾರವೂ ಮಾಡುತ್ತದೆ. ಅದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಗುರುವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಧಾನಸೌಧ ಪಶ್ಚಿಮ ದ್ವಾರದ ಬಳಿ ಇರುವ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ದೇವರಾಜ ಅರಸುರವರ 42ನೇ ಪುಣ್ಯಸ್ಮರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ದೇವರಾಜ ಅರಸು ಅವರು ಒಬ್ಬ ಜಾತ್ಯಾತೀತ ವ್ಯಕ್ತಿ. ಸಾಮಾಜಿಕ ನ್ಯಾಯದ ಹರಿಕಾರ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಸಮಾಜದ ತಳವರ್ಗದ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮೇಲಕ್ಕೆತ್ತುವ, ಮುಖ್ಯವಾಹಿನಿಗೆ ತರಲು ಪ್ರಯತ್ನ ಮಾಡಿದರು. ಹಾವನೂರು ಆಯೋಗವನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತಂದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಏಕೀಕರಣದ ನಂತರ 1973 ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದರು. ಈ ವರ್ಷ ಅದರ 50 ನೇ ವರ್ಷಾಚರಣೆಯ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದರು.
ದೇವರಾಜ ಅರಸು ಅವರು ಬಡವರ, ಶೋಷಿತರ , ಸಾಮಾಜಿಕ ನ್ಯಾಯದ ಪರವಾಗಿದ್ದ ನಾಯಕರು. ಅದಕ್ಕೇ ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತೇವೆ. ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಉಳುವವನೇ ಒಡೆಯ ಎಂದು ಘೋಷಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು.
*ಕಾಂಗ್ರೆಸ್ ಪಕ್ಷ ಮಾತ್ರ ಸಾಮಾಜಿಕ ನ್ಯಾಯ ಪಾಲಿಸುತ್ತಿದೆ*
ದೇವರಾಜ ಅರಸು ಅವರು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಎಂಟು ವರ್ಷಗಳ ಕಾಲ ಸಾಮಾಜಿಕ ನ್ಯಾಯದ ಅಡಿಪಾಯ ಹಾಕಿದರು. ಅದರ ಬುನಾದಿಯ ಮೇಲೆ ಸಾಮಾಜಿಕ ನ್ಯಾಯ ಕರ್ನಾಟಕದಲ್ಲಿ ಮುಂದುವರೆದಿದೆ ಕಾಂಗ್ರೆಸ್ ಪಕ್ಷ ಮಾತ್ರ ಸಾಮಾಜಿಕ ನ್ಯಾಯ ಪಾಲಿಸುತ್ತಿದೆ. ಇತರೆ ಪಕ್ಷಗಳಿಗೆ ಸಾಮಾಜಿಕ ನ್ಯಾಯದ ಕುರಿತು ಬದ್ಧತೆ ಇಲ್ಲ. ಬದಲಿಗೆ ಅದರ ವಿರುಧ್ಧವಾಗಿದ್ದಾರೆ ಎಂದರು.
*ಸಚಿವ ನಾಗೇಂದ್ರ ಅವರೊಂದಿಗೆ ಮಾತನಾಡಿದ್ದೇನೆ*
ಸಚಿವ ನಾಗೇಂದ್ರ ಅವರ ರಾಜಿನಾಮೆ ಕುರಿತಂತೆ ಮಾಧ್ಯಮದವರಿಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಅವರೊಂದಿಗೆ ಮಾತನಾಡಿದ್ದೇನೆ ನೋಡೋಣ ಎಂದರು.