ಬೆಳಗಾವಿ-೦೬:ವಿಶ್ವದಲ್ಲಿ ಅನೇಕ ಆಕಾಶಕಾಯಗಳಿದ್ದರೂ ಜೀವರಾಶಿಗಳು ವಾಸಿಸಲು ಯೋಗ್ಯವಾಗಿರುವ ಗ್ರಹ ಭೂಮಿ ಒಂದೇ. ಅದನ್ನು ನಾವೆಲ್ಲರೂ ಸಂರಕ್ಷಿಸೋಣ. ನಶಿಸುತ್ತಿರುವ ಭೂಮಿಯ ಮೇಲಿನ ಪರಿಸರದ ಮರುಸ್ಥಾಪನೆ, ಮರಭೂಮಿಕರಣ ಹಾಗೂ ಬರತಡೆಯುವಿಕೆ ಇಂದಿನ ಅನಿವಾರ್ಯ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಉಪಾಧ್ಯಕ್ಷ ಗಜಾನನ ಮಣ್ಣಿಕೇರಿ ಹೇಳಿದರು. ಅವರು ಜೂನ್ 5 ರಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಜನಾ ವಿಜ್ಞಾನ ಕೇಂದ್ರ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಹಯೋಗದಲ್ಲಿ ಜಿಲ್ಲಾ ಸ್ಕೌಟ್ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಜಾಗತಿಕ ತಾಪಮಾನ ತಡೆಗಟ್ಟಲು ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಪೋಷಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ಹಿಮವೆಲ್ಲಾ ಕರಗಿ ಪ್ರವಾದಿಂದ ನದಿ ದಡಗಳು ಜಲಾವೃತಗೊಂಡು, ಕಡಲ ತೀರ ಪ್ರದೇಶಗಳು ಸಮುದ್ರಮಯವಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಶೋಭಾ ಪೋಳ ಮಾತನಾಡಿ ಇಂದಿನ ವಿದ್ಯಾರ್ಥಿಗಳು ದೀಪಾವಳಿ, ಗಣೇಶ ಚತುರ್ಥಿ ಅಂತಹ ಹಬ್ಬಗಳನ್ನು ಪರಿಸರಸ್ನೇಹಿಯಾಗಿ ಆಚರಿಸಬೇಕು. ಹಬ್ಬಗಳನ್ನು ನೆಪವಾಗಿಟ್ಟುಕೊಂಡು ಯಾರೂ ಪರಿಸರ ಮಾಲಿನ್ಯ ಮಾಡಬಾರದು ಎಂದರು.
ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ್ ಪಾಟೀಲ್ ಅತಿಥಿ ಉಪನ್ಯಾಸ ನೀಡಿದರು. ವೇದಿಕೆಯ ಮೇಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ರಾಜಶ್ರೀ ಕುಳ್ಳಿ, ವೈಜ್ಞಾನಿಕ ಅಧಿಕಾರಿ ಡಾ. ಜಿ.ಎಮ್. ಪಾಟೀಲ, ಎನ್.ಬಿ. ಗುಡಿಸಿ, ಶ್ರವಣ್ ಕುಮಾರ್ ಮಣ್ಣಿಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಡಿ.ಪಿ. ಅತ್ತಾರ ಸ್ವಾಗತಿಸಿದರು. ವಿಠ್ಠಲ ಎಸ್.ಪಿ. ವಂದಿಸಿದರು.
ಇದೇ ಸಂದರ್ಭದಲ್ಲಿ ನಗರದ ವಿವಿಧ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮಕ್ಕೂ ಮುಂಚೆ ಟಿಳಕವಾಡಿಯ ವಿವಿಧ ಬಡಾವಣೆಗಳಲ್ಲಿ ಪರಿಸರ ಜಾಗೃತಿ ಜಾಥಾ ನಡೆಯಿತು.