ಬೆಳಗಾವಿ-೦೫: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ವಿಜೇತರಾಗುತ್ತಿದ್ದಂತೆಯೇ ಪಕ್ಷ ಕಾರ್ಯಕರ್ತರ ಸಂತಸಕ್ಕೆ ಪಾರವೇ ಇಲ್ಲದಂತಾಯಿತು.
ಚಿಕ್ಕೋಡಿಯ ಆರ್. ಡಿ ಮೈದಾನದ ಎದುರು ಲೋಕಸಭಾ ಚುನಾವಣೆಯ ಎಣಿಕೆ ಕೇಂದ್ರದ ಸಮೀಪ ಕಾಂಗ್ರೆಸ್ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ‘ಭಾರತ್ ಮಾತಾ ಕೀ ಜೈ’ ಎಂಬ ಜಯಘೋಷಗಳನ್ನು ಕೂಗುವ ಮೂಲಕ ಸಂಭ್ರಮಿಸಿದರು. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಗೆಲುವಿನ ಸಂಭ್ರಮದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಪುತ್ರ ರಾಹುಲ್ ಜಾರಕಿಹೊಳಿ ಸೇರಿದಂತೆ ಕೈ ಶಾಸಕರು ಹಾಗೂ ಸಾವಿರಾರು ಕಾಂಗ್ರೆಸ್ ಮುಖಂಡರು- ಕಾರ್ಯಕರ್ತರು ಈ ಸಂಭ್ರಮದಲ್ಲಿ ಭಾಗಿಯಾದರು.
ಮುಗಿಲು ಮುಟ್ಟಿದ ವಿಜಯೋತ್ಸವ: ಚಿಕ್ಕೋಡಿಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಜಮೆಯಾದ ಪಕ್ಷದ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಮಾತ್ರವಲ್ಲ ಪರಸ್ಪರ ಗುಲಾಲು ಎರಚಿ ಖುಷಿಪಟ್ಟರೆ, ಇನ್ನು ಕೆಲ ಕಾರ್ಯಕರ್ತರು ಪರಸ್ಪರ ಸಿಹಿ ಹಂಚುವ ಮೂಲಕ ಕುಣಿದು ಕುಪ್ಪಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ್ದರಿಂದ ಆನಂದತುಂದಿಲರಾದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ನರ್ತನಗೈಯ್ಯುವ ಮೂಲಕ ಸಂಭ್ರಮಿಸಿದರು.
ಕೈ ವಿಜಯೋತ್ಸವದಲ್ಲಿ ಹಾರಾಡಿದ ‘ಕೇಸರಿ-ಬಿಳಿ-ಹಸಿರು’ ಪತಾಕೆ: ಚಿಕ್ಕೋಡಿಯಲ್ಲಿ ಪ್ರಿಯಂಕಾ ಜಾರಕಿಹೊಳಿ ಜಯ ಸಾಧಿಸುತ್ತಿದ್ದಂತೆ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟಗಳು ಎಲ್ಲಡೆ ರಾರಾಜಿಸಿದವು. ಆರ್ ಡಿ ಮೈದಾನದ ಸನಿಹ ಸಾವಿರಾರು ಯುವಜನರು, ನಾಗರಿಕರು ವಿಜಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಚಿಕ್ಕೋಡಿಯಾದ್ಯಂತ ಈ ಬಾರಿ ಕಾಂಗ್ರೆಸ್ ಧ್ವಜ ರಾರಾಜಿಸಿದವು. ಬೈಕ್ ಗಳ ಮೇಲೆ ಯುವಕರು ಕಾಂಗ್ರೆಸ್ ಧ್ವಜವನ್ನು ಕೈಯಲ್ಲಿ ಹಿಡಿದು ಸಾಗಿದರು. ಇಡಿ ಚಿಕ್ಖೋಡಿ ಕಾಂಗ್ರೆಸ್ ಬಣ್ಣವಾಗಿ ಮಾರ್ಪಟ್ಟಿತ್ತು.
ಎದುರಾಳಿಗಳ ಎದೆ ನಡುಗಿಸಿದ ಸಾಹುಕಾರ್: ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳು ಜನಜನಿತ. ಅತ್ಯಂತ ಸರಳ ಸಜ್ಜನ ರಾಜಕಾರಣಿಯಾಗಿ ಸತೀಶ ಜಾರಕಿಹೊಳಿ ಅವರು ದಿನೇ ದಿನೇ ರಾಜ್ಯ ರಾಜಕಾರಣದಲ್ಲಿ ಮೇಲಕ್ಕೆ ಏರುತ್ತಿರುವುದು ವಿಶೇಷವಾಗಿದೆ. ಈ ಬಾರಿಯ ನಡೆದ ಲೋಕ ಚುನಾವಣೆಯಲ್ಲಿ ಅವರು ತಾವೊಬ್ಬ ಮಾಸ್ಟರ್ ಮೈಂಡ್ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಕಳೆದ ಬಾರಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮಂಗಲಾ ಅಂಗಡಿ ಅವರಿಂದ ಅತ್ಯಂತ ಕಡಿಮೆ ಅಂತರದಿಂದ ಸೋತ ಸಾಹುಕಾರ್ ಅದನ್ನೇ ಸವಾಲಾಗಿರಿಸಿಕೊಂಡ ಅವರು ಈ ಬಾರಿ ತಮ್ ಪುತ್ರಿಯನ್ನು 92655 ಮತಗಳ ಬಹುದೊಡ್ಡ ಅಂತರದಿಂದ ಗೆಲುವಿನ ಗೆರೆ ದಾಟಿಸುವ ಮೂಲಕ ಎದುರಾಳಿಗಳ ಎದೆ ನಡುಗಿಸುವಂತೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ಕೈ ಮೇಲೆಳಲು ಸಾಹುಕಾರ್ ರೂವಾರಿ: ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಾಲಿಗೆ ಸತೀಶ ಜಾರಕಿಹೊಳಿ ಬಹುದೊಡ್ಡ ನಾಯಕರಾಗಿ ಹೊರಹೊಮ್ಮಿರುವುದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸಾಬೀತಾಗಿದೆ. ಬಿಜೆಪಿಯ ಭದ್ರಕೋಟೆಯಾಗಿ ಗುರುತಿಸಿಕೊಂಡಿದ್ದ ಬೆಳಗಾವಿ-ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಜಯಭೇರಿ ಭಾರಿಸಿದೆ. ಇದರ ಹಿಂದಿನ ರೂವಾರಿಯೇ ಸತೀಶ ಜಾರಕಿಹೊಳಿಯವರಾಗಿದ್ದಾರೆ. ಅವರ ಅಮೋಘ ಕಾರ್ಯತಂತ್ರದ ಫಲವಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಬೆಳಗಾವಿ ಹಾಗೂ ಚಿಕ್ಕೋಡಿಯಲ್ಲಿ ಗೆದ್ದಿದೆ. ಸತೀಶ ಜಾರಕಿಹೊಳಿ ಅವರ ಪರಿಶ್ರಮದಿಂದ ಎಲ್ಲ ಕ್ಷೇತ್ರಗಳು ಈ ಬಾರಿ ಕಾಂಗ್ರೆಸ್ ಬಗಲಿಗೆ ಮತ್ತೆ ಸೇರ್ಪಡೆಗೊಂಡಿವೆ. ಈ ಮೂಲಕ ಸತೀಶ ಜಾರಕಿಹೊಳಿ ಅವರು ತಮ್ಮ ಮಾಸ್ಟರ್ ಮೈಂಡ್ ರಾಜಕಾರಣದ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಗತ ವೈಭವವನ್ನು ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ತಂದುಕೊಟ್ಟ ಹಿರಿಮೆಗೆ ಪಾತ್ರರಾಗಿದ್ದಾರೆ. ಒಟ್ಟಾರೆ ಈ ಭಾರಿ ಚಿಕ್ಕೋಡಿ ಲೋಕಸಭಾ ಅಖಾಡದಲ್ಲಿ ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಜಯಶಾಲಿ ಆಗಿದ್ದು, ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟುವಂತೆ ನಿರ್ಮಾಣವಾಗಿದ್ದಂತೂ ಸತ್ಯ.