ಬೆಳಗಾವಿ-೦೨:ನಿತ್ಯ ಇಷ್ಟಲಿಂಗ ಪೂಜೆ ಮಾಡುವುದರಿಂದ ಮನುಷ್ಯನ ಮಾನಸಿಕ ವಿಕಾಸದ ಜೊತೆಗೆ ಆತನ ಏಕಾಗ್ರತೆ ವೃದ್ಧಿ ಹಾಗೂ ಬೌದ್ಧಿಕ ವಿಕಾಸವಾಗುತ್ತದೆ. ಏಕೆಂದರೆ ಇಷ್ಟಲಿಂಗ ಇದು ಪ್ರಾಣದ ಸ್ವರೂಪ ಇದ್ದಂತೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಶಿವಬಸವ ನಗರದ ಪ್ರಭುದೇವ ಸಭಾಗ್ರಹದಲ್ಲಿ ನಾಗನೂರು ರುದ್ರಾಕ್ಷಿ ಮಠ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಸಹಯೋಗದೊಂದಿಗೆ ಮಾಸಿಕ ಇಷ್ಟಲಿಂಗ ದೀಕ್ಷೆ ಹಾಗೂ ಪೂಜಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ನಿತ್ಯ ಇಷ್ಟಲಿಂಗ ಪೂಜೆ ಮಾಡುವುದರಿಂದ ಅವರ ಶಾಲಾ ಫಲಿತಾಂಶ ವೃದ್ಧಿಯ ಜೊತೆಗೆ ಆತ್ಮ ಸಂತೃಪ್ತಿ ಸಹ ದೊರೆಯುತ್ತದೆ. ಇಷ್ಟಲಿಂಗ ಧರಿಸಿದವರು ತಮ್ಮ ದುರ್ಗುಣಗಳನ್ನು ತ್ಯಜಿಸಿ ಸದ್ಗುಣಗಳನ್ನು ಹಾಗು ಸದಾಚಾರವನ್ನು ಅಳವಡಿಸಿಕೊಳ್ಳಬೇಕೆಂದು ಶ್ರೀಗಳು ಹೇಳಿದರು. ಕಾರ್ಯಕ್ರಮದಲ್ಲಿ ಸಂಚಾರಿ ಗುರುಬಸವ ಬಳಗದ ಜಿಲ್ಲಾಧ್ಯಕ್ಷ ಮಹಾಂತೇಶ ತೋರಣಗಟ್ಟಿ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು. ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಸೇರಿದಂತೆ ಅನೇಕ ಬಸವ ಅನುಯಾಯಿಗಳು ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ನಾಗನೂರು ರುದ್ರಾಕ್ಷಿ ಮಠದ ವತಿಯಿಂದ ಪ್ರಾರಂಭಿಸಲಾದ ಉಚಿತ ಪ್ರಸಾದ ನಿಲಯಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಗೊಂಡ ವಿದ್ಯಾರ್ಥಿಗಳಿಗೂ ಸಹ ಇಷ್ಟಲಿಂಗ ದೀಕ್ಷೆ ನೀಡಲಾಯಿತು.