ನವದೆಹಲಿ-೦೨: ಏಳನೇ ಮತ್ತು ಅಂತಿಮ ಹಂತದ ಲೋಕಸಭೆ ಚುನಾವಣೆ ಶಾಂತಿಯುತ ಶನಿವಾರ ನಡೆದಿದ್ದು ಶೇ.60.37ರಷ್ಟು ಮತದಾನವಾಗಿದೆ. ಚುನಾವಣಾ ಆಯೋಗದ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಗರಿಷ್ಠ 70.03 ಶೇಕಡಾ ಮತದಾನವಾಗಿದೆ.
ಏಳು ರಾಜ್ಯಗಳ 57 ಕ್ಷೇತ್ರಗಳಲ್ಲಿ ಶನಿವಾರ ಬೆಳಗ್ಗೆ 7 ಗಂಟೆಗೆ ಆರಂಭವಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಈ ಕ್ಷೇತ್ರದಲ್ಲಿ ಶೇ.56.35ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದ ಕೆಲವೆಡೆ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಪ್ರತ್ಯೇಕ ಘಟನೆಗಳನ್ನು ಹೊರತುಪಡಿಸಿ, ಎಲ್ಲಾ ರಾಜ್ಯಗಳಲ್ಲಿ ಮತದಾನ ಶಾಂತಿಯುತವಾಗಿದೆ ಎಂದು ಆಯೋಗ ತಿಳಿಸಿದೆ. ಒಡಿಶಾ ರಾಜ್ಯ ವಿಧಾನಸಭೆಯ ಉಳಿದ 42 ಕ್ಷೇತ್ರಗಳಿಗೂ ಮತದಾನ ನಡೆದಿದೆ.
ಲೋಕಸಭೆ ಚುನಾವಣೆಯ ಮತ ಎಣಿಕೆ ಮಂಗಳವಾರ ಜೂನ್ 4 ರಂದು ನಡೆಯಲಿದೆ. ಒಡಿಶಾ ಮತ್ತು ಆಂಧ್ರಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕೂಡ ಅದೇ ದಿನ ನಡೆಯಲಿದೆ. ಆದರೆ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ (ಇಂದು) ಭಾನುವಾರ ಜೂನ್ 2 ರಂದು ಮತ ಎಣಿಕೆ ನಡೆಯಲಿದೆ.
ವಿಶ್ವದ ಅತಿ ಎತ್ತರದ ಮತಗಟ್ಟೆಯಲ್ಲಿ ಮತದಾನ
ಮಂಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಲಾಹೌಲ್-ಸ್ಪಿತಿಯಲ್ಲಿ ವಿಶ್ವದ ಅತಿ ಎತ್ತರದ ಮತದಾನ ಕೇಂದ್ರವಾದ ತಾಶಿಗಂಗ್‌ನಲ್ಲಿ ಮತದಾರರು ಉತ್ಸುಕರಾಗಿದ್ದರು. ಈ ಬುಡಕಟ್ಟು ಪ್ರದೇಶದ ಮತದಾರರು ಸಾಂಪ್ರದಾಯಿಕ ಉಡುಗೆಯಲ್ಲಿ ಮತಗಟ್ಟೆಗೆ ಬಂದರು. ಸ್ಪಿತಿ ಕಣಿವೆಯ ಈ ಮತಗಟ್ಟೆಯಲ್ಲಿ ಶೇ.79ರಷ್ಟು ಮತದಾನವಾಗಿದೆ. ಈ ಮತಗಟ್ಟೆಯಲ್ಲಿ ಪ್ರಥಮ ಬಾರಿಗೆ ಮತದಾನ ಮಾಡಿದ 18 ವರ್ಷದ ಕುಂಜೊಕ್ ಟೆಂಜಿನ್ ಹರ್ಷ ವ್ಯಕ್ತಪಡಿಸಿದ್ದಾರೆ. ‘ನಾವು ಪುಸ್ತಕಗಳಲ್ಲಿ ಓದುತ್ತಿದ್ದೆವು ಅಥವಾ ಹಿರಿಯರಿಂದ ಮತದಾನದ ಬಗ್ಗೆ ಕೇಳುತ್ತಿದ್ದೆವು. ಆದರೆ ಈ ಬಾರಿ ಮೊದಲ ಬಾರಿಗೆ ಮತದಾನ ಮಾಡುವ ಅವಕಾಶ ಸಿಕ್ಕಾಗ ತುಂಬಾ ಖುಷಿಯಾಯಿತು. ದೇಶದ ಅತಿ ಎತ್ತರದ ಮತಗಟ್ಟೆಯಲ್ಲಿ ಮತದಾನ ಮಾಡಿದ್ದೇನೆ,” ಎಂದರು.
Photo image-(p.t.i)