ಚಿಕ್ಕೋಡಿ-೦೧ :- ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ತಾಲ್ಲೂಕಾ ಆಸ್ಪತ್ರೆಗೆ ದಾಖಲಾಗಿರುವ ಜನರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಈ ತರಹ ಘಟನೆ ಮರುಕಳಿಸದಂತೆ ಮುಂಜಾಗೃತಿ ಕ್ರಮ ವಹಿಸಬೇಕೆಂದು ಜಿಲ್ಲಾ ಪಂಚಾಯತ ಸಿ.ಇ.ಒ ರಾಹುಲ್ ಶಿಂಧೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ಬುಧವಾರ ನಡೆದ ಬಾಳುಮಾಮಾ ಜಾತ್ರೆಯಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥಗೊಂಡ ಜನರನ್ನು ಭೇಟಿ ಮಾಡಿದರು. ಇದೇ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಜಾತ್ರೆಯಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವುದು, ನೀರು ಮತ್ತು ಆಹಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ನಿರ್ದೇಶನ ನೀಡಿದರು.
ಅದರ ಜೊತೆಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕರೋಶಿ ಗ್ರಾಮ ಪಂಚಾಯಿತಿಯ ಕೂಲಿಕಾರ್ಮಿಕರೊಬ್ಬರು ಕೆಲಸದ ಸ್ಥಳದಲ್ಲಿ ಜಾರಿಬಿದ್ದು ಕೈ ಮುರಿದಕೊಂಡ ಕಾರ್ಮಿಕರ ಆರೋಗ್ಯವನ್ನು ವಿಚಾರಿಸಿದರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿದರು.
ಮುಂದುವರೆದ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಕಾಮಗಾರಿ ಪರಿಶೀಲಿಸಿ ಕಾಮಗಾರಿ ವಿಳಂಬದ ಕುರಿತು ವಿಚಾರಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಕೈಗೊಪ್ಪಿಸಬೇಕೆಂದು(Hand over) ಸೈಟ್ ಇಂಜಿನೀಯರ ಮತ್ತು ಗುತ್ತಿಗೆದಾರನಿಗೆ ತಿಳಿಸಿದರು. ಕಟ್ಟಡದ ಮೇಲ್ಛಾವಣಿ ಮೇಲೆ ಮುಂಬರುವ ಮಳೆ ನೀರಿನಿಂದ ಸೀಮೆಂಟ್ ಕಾಂಕ್ರೀಟ್ ಹಾಳಾಗದಿರಲು ತಗಡಿನ ಶೆಡ್ ನಿರ್ಮಾಣ ಮಾಡಲು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ. ಉಪ ಕಾರ್ಯದರ್ಶಿ ಬಸವರಾಜ್ ಅಡವಿಮಠ, ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಸಹಾಯಕ ನಿರ್ದೇಶಕ (ಗ್ರಾಉ) ಶಿವಾನಂದ ಶೀರಗಾಂವಿ, ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಸ್ .ಎಸ್ ಗಡಾದ, ತಾಲೂಕು ಆರೋಗ್ಯ ಅಧಿಕಾರಿ ಸುಕುಮಾರ ಭಾಗಾಯಿ, ಗ್ರಾಮ ಪಂಚಾಯಿತಿ ಅಭಿವೃದ್ಧಿಅಧಿಕಾರಿ, ಐಇಸಿ ಸಂಯೋಜಕರು,ಬಿ.ಎಪ್. ಟಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.