ಬೆಳಗಾವಿ-೩೦:ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಮೊದಲುಗೊಂಡು, ಪಠ್ಯಕ್ರಮದ ರೂಪುರೇಷೆ, ಭೋಧನೆಯ ಅವಧಿ ಸೇರಿದಂತೆ ಮುಂತಾದ ವಿಷಯಗಳ ಕುರಿತ ನಿರ್ಣಯಗಳಿಗೆ ನುರಿತ ತಜ್ಞರ ಅಭಿಪ್ರಾಯಗಳನ್ನು ಪಡೆಯುವುದು ಸೂಕ್ತ ತಿಳಿಸುತ್ತಲೇ, ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಜಾರಿಯಾದ ಶಿಕ್ಷಣ ನೀತಿಗಳು ಮತ್ತು ಪಠ್ಯಕ್ರಮಗಳು ವಿದ್ಯಾರ್ಥಿಗಳ ಮೇಲೆ ಉಂಟು ಮಾಡಿರುವ ಪರಿಣಾಮದ ಹಿನ್ನೆಲೆಯಲ್ಲಿ ಕೆಲವು ಗಂಭೀರ ಅಂಶಗಳೆಡೆ ಸಭೆಯ ಗಮನ ಸೇಳೆಯಲಾಯಿತು.
ಈ ಹಿಂದೆ, ಯಾವುದೇ ವಿಷಯದ ಸಮಗ್ರ ಅಧ್ಯಯನ ಮತ್ತು ಅದರ ಮೌಲ್ಯಾಂಕಣದಲ್ಲಿ ವಿಶ್ಲೇಷಣಾತ್ಮಕತೆಗೆ ಆದ್ಯತೆ ನೀಡಲಾಗುತ್ತಿತ್ತು. ಒಂದು ವಿಷಯದ ಕುರಿತು ಯೋಚಿಸಲು, ತರ್ಕ ಮತ್ತು ಪರಾಮರ್ಶೆ ನಡೆಸಲು ಪ್ರೋತ್ಸಾಹ ದೊರೆಯುತ್ತಿತ್ತು ಮತ್ತು ಇದರ ಪರಿಣಾಮವಾಗಿ ಯಾವುದೇ ವಿಷಯದ ಕುರಿತು ಆಳವಾದ ಅಧ್ಯಯನಕ್ಕೆ ಹೆಚ್ಚಿನ ಅವಕಾಶವು ದೊರೆಯುತ್ತಿತ್ತು.
ಆದರೆ, ಈಗ ಬಹುಆಯ್ಕೆ ಮಾದರಿಯೇ ಮಾನದಂಡವೆಂಬಂತೆ ಕ್ರಮೇಣವಾಗಿ ಅದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ತತ್ಪರಿಣಾಮ, ಇಂದಿನ ತಲೆಮಾರಿನ ವಿಶ್ಲೇಷಣಾ ಮನೋಭಾವವನ್ನೇ ಇದು ಅಪಾಯಕ್ಕೆ ತಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಲಾಯಿತು.
ಒಂದೆಡೆ ಚಿಂತನಾ ಪ್ರಕ್ರಿಯೆಯು ಕುಂಠಿತಗೊಂಡಿದ್ದರೆ, ಇನ್ನೊಂದೆಡೆ, ಸಮಾಜದಲ್ಲಿನ ತೀವ್ರ ಸಾಂಸ್ಕೃತಿಕ ಅಧಃಪತನಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಶಾಲಾಮಟ್ಟದ ಹುಡುಗರು ಅಪರಾಧ ಕೃತ್ಯಗಳಲ್ಲಿ ತೊಡಗುವುದು, ಸಮಾಜ ಘಾತುಕ ಶಕ್ತಿಗಳ ಕೈವಶವಾಗುವುದು ಸೇರಿದಂತೆ, ಉನ್ನತ ಪದವಿಗಳನ್ನು ಪೂರೈಸಿದ ವಿದ್ಯಾರ್ಥಿಗಳು ನಿರುದ್ಯೋಗ ಮತ್ತು ಜೀವನದಲ್ಲಿ ಎದುರಾಗುವ ಅನೇಕ ಸವಾಲುಗಳನ್ನು ಎದುರಿಸಲಾಗದೆ ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ. ಈ ಬೆಳವಣಿಗೆಯಲ್ಲಿ, ಅಶ್ಲೀಲ ಸಿನಿಮಾ-ಸಾಹಿತ್ಯ ಸೇರಿಂದಂತೆ ಸಾಮಾಜಿಕ ಜಾಲತಾಣಗಳ ಹಾವಳಿಯು ಮೇಲ್ನೋಟಕ್ಕೆ ಗೋಚರಿಸುತ್ತಿರುವುದು ನಿಜವಷ್ಟೆ! ಆದರೆ, ಈ ಸಮಸ್ಯೆಗಳ ಆಳಕ್ಕಿಳಿದು ನೋಡಿದಾಗ, ವಿದ್ಯಾರ್ಥಿಗಳಲ್ಲಿ ಬಲಿಷ್ಠ ಮೌಲ್ಯ- ಆದರ್ಶಗಳನ್ನು ತುಂಬಿ, ಬಾಹ್ಯ ಪ್ರಲೋಭಣೆಗಳನ್ನು ಸೋಲಿಸಲು ಅವರನ್ನು ಸದೃಢರನ್ನಾಗಿ ರೂಪಿಸಬಲ್ಲ ಸಮರ್ಥ ಪಠ್ಯದ ಕೊರತೆಯು ಮುಖಕ್ಕೆ ರಾಚುತ್ತಿದೆ. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳಿಗೆ ನಮ್ಮ ದೇಶವೂ ಸೇರಿದಂತೆ ಪ್ರಪಂಚದ ಮಹಾನ್ ವ್ಯಕ್ತಿಗಳ ಜೀವನ ಸಂಘರ್ಷ ಮತ್ತು ಚಿಂತನೆಗಳ ಅರಿವು ಮೂಡಿಸುವ ಕೆಲಸವನ್ನು ನಮ್ಮ ಪಠ್ಯಕ್ರಮವು ಮಾಡಬೇಕಿದೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್, ನೇತಾಜಿ, ವಿವೇಕಾನಂದ, ಕಾರ್ಲ್ ಮಾರ್ಕ್ಸ್, ಐನ್‍ಸ್ಟೈನ್ ಸೇರಿದಂತೆ ಹಲವು ವಿಚಾರಧಾರೆಗಳನ್ನು ನಮ್ಮ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು. ಭಗತ್ ಸಿಂಗರ ಮಾತಿನಂತೆ, ವಿಮರ್ಶೆಯ ಒರೆಗಲ್ಲಿನ ಮೇಲೆ ಅವರು ಈ ಎಲ್ಲ ಚಿಂತನೆಗಳ ಪರೀಕ್ಷೆ ನಡೆಸಬೇಕು. ವೈಜ್ಞಾನಿಕ ಚಿಂತನಾ ಪ್ರಕ್ರಿಯೆಯ ಆಧಾರದ ಮೇಲೆ ತಮಗೆ ಸರಿಯೆನಿಸಿದ್ದನ್ನು ಅವರು ತಮ್ಮ ಆದರ್ಶವಾಗಿ ಆಯ್ಕೆ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಿಂದ, ನಮ್ಮ ದೇಶದ ನವೋದಯ ಚಳುವಳಿಯ ಹರಿಕಾರರು, ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳು ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳ ಚಿಂತನೆಗಳನ್ನು ಸತ್ಯನಿಷ್ಟವಾಗಿ (ಮಿತ್ಯಾಂಶಗಳನ್ನು ಕೂಲಂಕುಶವಾಗಿ ತೊಡೆದು ಹಾಕಿ) ಪಠ್ಯಕ್ರಮದಲ್ಲಿ ಅಳವಡಿಸುವುದು ಈ ಹೊತ್ತಿನ ತುರ್ತು ಅಗತ್ಯವಾಗಿದೆ ಎಂದು ಮನವರಿಕೆ ಮಾಡಲಾಯಿತು.
ಇದರೊಂದಿಗೆ, ಎನ್ಈಪಿ-2020 ಸೂಚಿಸಿದ್ದ, ಕೌಶಲ್ಯಾಭಿವೃದ್ಧಿ ಹೆಸರಿನಲ್ಲಿ ಶಿಕ್ಷಣದ ಅಡಿಪಾಯವನ್ನೇ ಅಲುಗಾಡಿಸುವ ವೃತ್ತಿ ಶಿಕ್ಷಣ, ಕಲಾ ವಿಭಾಗದ ವಿದ್ಯಾರ್ಥಿ ವಾಣಿಜ್ಯದ ವಿಷಯಗಳನ್ನು, ವಿಜ್ಞಾನದ ವಿದ್ಯಾರ್ಥಿಯು ಕಲೆ ಮತ್ತು ಇನ್ನಿತರ ವಿಷಯಗಳನ್ನು ಕಲಿಯಬೇಕೆಂದು, ‘ಎಲ್ಲರೂ ಎಲ್ಲ ವಿಷಯಗಳನ್ನೂ ಕಲಿಯಬೇಕು’ ಎಂಬ ಹೆಸರಿನಲ್ಲಿ, ಯಾವ ವಿಷಯದ ಆಳ ಅಧ್ಯಯನಕ್ಕೂ ವಿದ್ಯಾರ್ಥಿಗಳನ್ನು ತೊಡಗಿಸದ, ನೇರವಾಗಿ ಅವರ ಚಿಂತನೆಯ ಮೇಲೆ ದಾಳಿ ಮಾಡಿ ‘ಮೇಲ್ಪದರದ ಚಿಂತನಾ ಪ್ರಕ್ರಿಯೆಗೆ’ ವಿದ್ಯಾರ್ಥಿಗಳನ್ನು ಗುರಿ ಮಾಡುವ ಕಲಸುಮೇಲೊಗರದ ‘ಬಹುಶಿಸ್ತೀಯ ಪದ್ದತಿಯನ್ನು’ ಸಂಪೂರ್ಣವಾಗಿ ಕೈಬಿಡಬೇಕು.
ನಮ್ಮ ದೇಶದ ನವೋದಯ ಚಿಂತಕರು ಹಾಗೂ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರು ನಂಬಿ ಅನುಷ್ಠಾನಗೊಳಿಸಲು ಹೋರಾಡಿದ, ಪ್ರಜಾತಾಂತ್ರಿಕ – ವೈಜ್ಞಾನಿಕ – ಧರ್ಮನಿರಪೇಕ್ಷ ಶಿಕ್ಷಣ ವ್ಯವಸ್ಥೆಯು ನಮ್ಮದಾಗಬೇಕು. ಈ ಎಲ್ಲ ಮಹಾನ್ ವ್ಯಕ್ತಿಗಳ ಕನಸಿನ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಆಯೋಗದ ಸದಸ್ಯರಾದ ಪ್ರೊ ರಾಜೇಂದ್ರ ಚೆನ್ನಿ, ಡಾ. ಭಾಗ್ಯವಾನ್ ಮುದಿಗೌಡರ್ ಹಾಗೂ ಪ್ರೊ. ಸುಧಾಂಶು ಭುಷಣ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ನಿಯೋಗದಲ್ಲಿ ಎಐಡಿಎಸ್ಓ ರಾಜ್ಯ ಸೆಕ್ರೆಟರಿಯಟ್ ಸದಸ್ಯರಾದ ಕಾಮ್ರೇಡ್ ರವಿಕಿರಣ್ ಜೆ. ಪಿ ಹಾಗೂ ಪೂಜಾ ನಂದಿಹಳ್ಳಿ ಉಪಸ್ಥಿತರಿದ್ದರು.
ರಾಜ್ಯದ ವಿದ್ಯಾರ್ಥಿ ಸಮೂಹದ ಪರವಾಗಿ ಈ ಆಗ್ರಹಗಳನ್ನು ಸಮಿತಿಗೆ ಸಲ್ಲಿಸಲಾಯಿತು.
1. ಬಹುಆಯ್ಕೆ ಪದ್ದತಿಗೆ ಬದಲಾಗಿ ವಿಶ್ಲೇಷಣಾತ್ಮಕ ಕಲಿಕೆ ಮತ್ತು ಪ್ರಶ್ನೋತ್ತರಗಳಿಗೆ ಆಧ್ಯತೆ ನೀಡಬೇಕು.
2. ದೇಶದ ಸ್ವಾತಂತ್ರ್ಯ ಹೋರಾಟಗಾರರು, ನವೋದಯ ಚಳುವಳಿಯ ಹರಿಕಾರರು ಸೇರಿದಂತೆ ಜಗತ್ತಿನ ಮಹಾನ್ ವ್ಯಕ್ತಿಗಳ ಚಿಂತನೆಗಳನ್ನು ಸತ್ಯನಿಷ್ಟವಾಗಿ ಪಠ್ಯದಲ್ಲಿ ಅಳವಡಿಸಬೇಕು.
3. ಬಹು ಶಿಸ್ತೀಯ ಪದ್ಧತಿಯನ್ನು ಕೈ ಬಿಟ್ಟು ಹಳೆಯ ಪದ್ಧತಿಯನ್ನು ಮುಂದುವರಿಸಬೇಕು.
4. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮೂರು ಐಚ್ಛಿಕ ವಿಷಯಗಳ ಅಧ್ಯಯನ ಮಾದರಿಯನ್ನು ಅಳವಡಿಸಬೇಕು.
5. ಪಠ್ಯಕ್ರಮದ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ವೈಜ್ಞಾನಿಕ – ಧರ್ಮನಿರಪೇಕ್ಷ- ಪ್ರಜಾತಾಂತ್ರಿಕ ಅಂಶಗಳನ್ನು ಬಲಪಡಿಸಿ.