ಬೆಳಗಾವಿ-೨೫: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ದೊಡ್ಡ ಕನಸುಗಳನ್ನು ಕಾಣುವುದರ ಜೊತೆಗೆ ತಮ್ಮ ಗುರಿ ಮುಟ್ಟುವತನಕ ಧ್ಯೆಯ ಮರೆಯಬಾರದು ಎಂದು ಅರಿಹಂತ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮಹಾದೇವ ದೀಕ್ಷಿತ ಅವರು ಇಂದಿಲ್ಲಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬೆಳಗಾವಿ ತಾಲೂಕಿನ ಬಸವನ ಕುಡಚಿಯಲ್ಲಿಯ ಭರತೇಶ ಹೋಮಿಯೋಪೆಥಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮಾಜಿ ವಿದ್ಯಾರ್ಥಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು , ಒಮ್ಮೆ ಶಿಕ್ಷಣ ಪೂರೈಸಿದ ನಂತರ ಉದ್ಯೋಗಕ್ಕಾಗಿ ಹೊರ ದೇಶಕ್ಕೆ ಹೋಗಬಹದು. ಅಲ್ಲಿ ದೊಡ್ಡ ಕನಸು ಕಾಣಬೇಕು. ಆ ಕನಸುಗಳನ್ನು ಈಡೇರಿಸುವುದಕ್ಕಾಗಿ ಒಂದು ಧ್ಯೆಯವನ್ನು ಮುಂದಿಟ್ಟಿಕೊಂಡು ಹೆಜ್ಜೆಹಾಕಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಅವರು ತಿಳಿಸಿದರು.
ತಾವು ಉದ್ಯೋಗ ಮಾಡುವಾಗ ಹೊಂದಿದ ಹೊಸ ಅನುಭವ, ಹೊಸ ತಾಂತ್ರಿಕತೆ ಸೇರಿದಂತೆ ಇನ್ನೂ ಹೊಸತನ ಪ್ರಯೋಗಗಳ ಬಗ್ಗೆ ತಿಳಿವಳಿಕೆ ಹೊಂದಿದ್ದರೆ ಅವುಗಳನ್ನು ತಾವು ಕಲಿತ ಶಾಲೆ ಮಹಾವಿದ್ಯಾಲಯದ ಜೊತೆ ಹಂಚಿಕೊಳ್ಳಬೇಕು. ಇದರಿಂದ ಮಹಾವಿದ್ಯಾಲಯಗಳು ಬದಲಾವಣೆಗೊಂಡು ಹೊಸತನವನ್ನು ಅಳವಡಿಸಿಕೊಳ್ಳಲು ಅನಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಆಗಮಿಸಿದ ಬ್ಯಾಂಕ ಆಫ್ ಇಂಡಿಯಾ ವಲಯ ಪ್ರಬಂಧಕ ವಿ.ವಿ.ಕೃಷ್ಣಕಿಶೋರ ಅವರು ಮಾತನಾಡಿ, ಬ್ಯಾಂಕ ಆಫ್ ಇಂಡಿಯಾ ಹಲವಾರು ಕ್ಷೇತ್ರಗಳಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತ ಬಂದಿದೆ. ಭರತೇಶ ಶೀಕ್ಷಣ ಸಂಸ್ಥೆಗೂ ಸಹ ಆರ್ಥಿಕ ನೆರವು ನೀಡುತ್ತ ತನ್ನ ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸಿದೆ. ಮುಂಬರುವ ದಿನಗಳಲ್ಲಿ ಈ ಸಂಸ್ಥೆಯ ಮಾಜಿ ವಿದ್ಯಾರ್ಥಿಗಳು ಹೊಸದಾಗಿ ಉದ್ಯೋಗ ಪ್ರಾರಂಭಿಸಲು ಮುಂದೆ ಬಂದಲ್ಲಿ ಅಂತವರಿಗೂ ಸಹ ಆರ್ಥಿಕ ನೆರವು ನೀಡಲಾಗುವುದೆಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಬ್ಯಾಂಕ ಆಫ್ ಇಂಡಿಯಾ ವತಿಯಿಂದ ಭರತೇಶ ಆಸ್ಪತ್ರೆಗೆ ಒಂದು ಅಂಬ್ಯುಲೆನ್ಸ ನೀಡಲಾಯಿತು. ದೊಡ್ಡಣ್ಣವರ ಬ್ರದರ್ಸ ಸಂಸ್ಥೆಯ ನಿರ್ದೇಶಕ ಪ್ರವೀಣ ದೊಡ್ಡಣ್ಣವರ ಸ್ಕಿಲ ಲ್ಯಾಬ ಉದ್ಘಾಟಿಸಿದರು. ಪ್ರಾಚಾರ್ಯ ಡಾ. ಶ್ರೀಕಾಂತ ಕೊಂಕಣಿ ಅತಿಥಿಗಳನ್ನು ಸ್ವಾಗತಿಸಿದರು. ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ವಿದ್ಯಾರ್ಥಿಗಳಾದ ಪರ್ಶಿ ಭರುಚಾ, ಡಾ.ಚಂದ್ರಣ್ಣಾ, ಡಾ. ಇಂದಿರಾ ಕುಲಕರ್ಣಿ, ಡಾ.ಪೂಜಾ ಹುಟಗಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಮಹಾವಿದ್ಯಾಲಯದ ಸಲಹಾ ಸಮಿತಿ ಅಧ್ಯಕ್ಷೆ ಡಾ. ಸಾವಿತ್ರಿ ದೊಡ್ಡಣ್ಣವರ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆ ಮೇಲೆ ಪುಷ್ಪದಂತ ದೊಡ್ಡಣ್ಣವರ, ಭರತೇಶ ಶೀಕ್ಷಣ ಸಂಸ್ಥೆಯ ಖಜಾಂಚಿ ಭೂಷಣ ಮಿರ್ಜಿ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶ್ರೀಪಾಲ ಖೇಮಲಾಪೂರೆ ಅವರು ವಹಿಸಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಅಮೃತಾ ಫಡ್ನಿಸ ಸ್ವಾಗತ ಗೀತೆ ಹಾಡಿದರು. ಡಾ.ರಾಜಶೇಖರ ಖುರಸೆ ವಂದಿಸಿದರು. ಡಾ.ಕವಿತಾ ಬುಗಡೆ ಕಾರ್ಯಕ್ರಮ ನಿರೂಪಿಸಿದರು.