ಬೆಳಗಾವಿ-೨೪: ಶಿವಬಸವ ನಗರದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ ಕಾರ್ಯಕ್ರಮ “ಬ್ಲಿಸ್ 2024″ರ ಅಂಗವಾಗಿ ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರ ಗಾನಸುದೆಯಲ್ಲಿ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಬೆಳಗಾವಿಯ ಜನತೆ ಸಂಗೀತ ಆಸ್ವಾದಿಸಿದರು.
ವಿಜಯ ಪ್ರಕಾಶ್ ಅವರ ಸುಪ್ರಸಿದ್ಧ ಗೀತೆಗಳಾದ ‘ಬೆಳಗಾಗಿ ನಾನೆದ್ದು ಯಾರ ಮುಖವ ನೋಡಿದೆ’ ಸಿಂಗಾರ ಸಿರಿಯೇ, ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಮುಂತಾದ ಹಾಡುಗಳಿಗೆ ಜನ ಚಪ್ಪಾಳೆ, ಶಿಳ್ಳೆ ಹೊಡೆಯುತ್ತಾ ಸಂಗೀತ ಆಸ್ವಾದಿಸಿದರು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಿಗಂತೂ ಇಡೀ ಯುವಸಮುದಾಯ ಕುಣಿದು ಕುಪ್ಪಳಿಸಿ ಕನ್ನಡ ಪ್ರೇಮ ಮೆರೆದರು. ನಾಗನೂರು ರುದ್ರಾಕ್ಷಿ ಮಠದ ಡಾ. ಶಿವಬಸವ ಮಹಾಸ್ವಾಮಿಜಿಯವರ ಕುರಿತಾಗಿ ಬಸವರಾಜ ಕಟ್ಟಿಮನಿಯವರು ಬರೆದ “ಪಲ್ಲಕ್ಕಿಯ ನೇರಲಿಲ್ಲ ನೀವು” ಎಂಬ ಹಾಡು ವಿಜಯ ಪ್ರಕಾಶ್ ಅವರ ಧ್ವನಿಯಲ್ಲಿ ಕೇಳಿ ಭಕ್ತಿಪರವಷರಾದರು. ಇದೇ ಸಂದರ್ಭದಲ್ಲಿ ನೆರೆದಿದ್ದ ಸಂಗೀತ ಪ್ರೇಮಿಗಳನ್ನು ಉದ್ದೇಶಿಸಿ ಮಾತನಾಡಿದ ವಿಜಯ ಪ್ರಕಾಶ್ ಸುರಿಯುತ್ತಿರುವ ಮಳೆಯಲ್ಲಿಯೂ ವಿಚಲಿತರಾಗದೇ ಅಪಾರ ಸಂಖ್ಯೆಯಲ್ಲಿ ಬೆಳಗಾವಿಗರು ಸೇರಿರುವುದು ಕನ್ನಡ ಭಾಷೆಗೆ ಹಾಗೂ ಸಂಗೀತಕ್ಕೆ ಇರುವ ತಾಕತ್ತು ತೋರಿಸುತ್ತದೆ. ಬೆಳಗಾವಿಯ ಜನತೆ ಹೃದಯ ವೈಶಾಲ್ಯದವರು. ಅಪ್ಪಟ ಕನ್ನಡ ಪ್ರೇಮಿಗಳು. ಬೆಳಗಾವಿಗರ ಕನ್ನಡ ಪ್ರೇಮ ಇಡೀ ರಾಜ್ಯದ ಜನತೆ ಅಳವಡಿಸಿಕೊಳ್ಳಬೇಕು ಎಂದರು.
ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಅವರನ್ನು ಸನ್ಮಾನಿಸಿ ಮಾತನಾಡಿದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಸಂಗೀತ ಗಡಿ ಮತ್ತು ಸಂಸ್ಕೃತಿಯನ್ನು ಮೀರಿದ ಸಾರ್ವತ್ರಿಕ ಭಾಷೆ. ಸಂಗೀತಕ್ಕೆ ಬುದ್ಧಿ ಶಕ್ತಿ ಉತ್ತೇಜಿಸುವ ಹಾಗೂ ಸೃಜನಶೀಲತೆಯನ್ನು ಬೆಳೆಸುವ ವಿಶಿಷ್ಟ ಗುಣವಿದೆ. ವ್ಯಕ್ತಿಯ ವ್ಯಕ್ತಿತ್ವ ವಿಕಾಸದಲ್ಲೂ ಸಂಗೀತ ಅಪಾರ ಪ್ರಭಾವ ಬೀರುತ್ತದೆ. ಇಂತಹ ಸಂಗೀತವನ್ನು ವಿಜಯ ಪ್ರಕಾಶ ಅವರ ಧ್ವನಿಯಲ್ಲಿ ಕೇಳುವುದೇ ಕರ್ಣಾನಂದ ಎಂದರು. ಕಾರ್ಯಕ್ರಮದಲ್ಲಿ ಯಡಿಯೂರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು, ತಾಂತ್ರಿಕ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಚೇರಮನ್ ಎಫ್. ವ್ಹಿ. ಮಾನ್ವಿ, ಸ್ಥಳೀಯ ಶಾಸಕ ರಾಜು ಸೇಟ್, ಕಾಲೇಜಿನ ಪ್ರಾಚಾರ್ಯ ಡಾ. ಬಿ. ಆರ್. ಪಟಗುಂದಿ ಉಪನ್ಯಾಸಕ ಮಂಜುನಾಥ ಶರಣಪ್ಪನವರ ಸೇರಿದಂತೆ ವಿವಿಧ ಗಣ್ಯರು, ಸಾವಿರಾರು ವಿದ್ಯಾರ್ಥಿಗಳು ಸಂಗೀತ ಆಸ್ವಾದಿಸಿದರು.