ಬೆಳಗಾವಿ-೨೪: ಮಾನಸಿಕ ಒತ್ತಡವನ್ನು ಸೈನಿಕರು ನಿರ್ಲಕ್ಷಿಸಿದರೆ ತಮ್ಮ ಸಮಗ್ರ ಆರೋಗ್ಯ ಮತ್ತು ಕೌಟುಂಬಿಕ, ಸಾಮಾಜಿಕ ಹಾಗೂ ವೃತ್ತಿ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ ಎಂದು ನಗರದ ಕಾಲೇಜು ರಸ್ತೆಯ ಶ್ರೀ ಆರ್ಥೋ ಸರ್ಜನ್ ಹಾಗೂ ನಿರ್ದೇಶಕ ಡಾ. ಐ. ದೇವಗೌಡ ತಿಳಿಸಿದರು.
ನಗರದ ಮರಾಠಾ ಲಘು ಪದಾತಿದಳದ ಯಶವಂತ ಘಾಡಗೆ ಸಭಾಂಗಣದಲ್ಲಿ ಸೈನ್ಯಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಸೈನಿಕರಿಗೆ ಆಗುವ ಮಾನಸಿಕ ಒತ್ತಡ ಹಾಗೂ ನೋವುಗಳ ಬಗ್ಗೆ ಶುಕ್ರವಾರ ಆಯೋಜಿಸಲಾದ ಸಂವಾದ, ಚಿಕಿತ್ಸಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೈನಿಕರು ಕರ್ತವ್ಯ ನಿರ್ವಹಿಸುವಾಗ, ಆರ್ಮಿ ಟ್ರೇನಿಂಗ್ ಅವಧಿಯಲ್ಲಿ, ಯುದ್ಧ ಹಾಗೂ ಪ್ರಕ್ಷುಬ್ಧ ಸ್ಥಿತಿ ಮತ್ತು ಸನ್ನಿವೇಶಗಳನ್ನು ಎದುರಿಸುವಾಗ ಆಗುವ ದೈಹಿಕ ನ್ಯೂನ್ಯತೆಗಳು ಮತ್ತು ಮಾನಸಿಕ ಖಿನ್ನತೆ, ಆಘಾತಗಳನ್ನು ನಿರ್ವಹಿಸುವ ಬಗೆಗೆ ಹಲವು ಉದಾಹರಣೆಗಳ ಮೂಲಕ ಸೈನಿಕರಿಗೆ ಡಾ. ದೇವಗೌಡ ಮನವರಿಕೆ ಮಾಡಿದರು.
ಸೈನಿಕರು ಇಳಿಯುವ, ಏರುವ, ಜಿಗಿಯುವ ಹಲವಾರು ದೈಹಿಕ ಪರಿಶ್ರಮ ಪಡುವಾಗ ಅಗತ್ಯವಾಗಿ ಎಚ್ಚರ ವಹಿಸಬೇಕಾದ ದೈಹಿಕ ಎಚ್ಚರಿಕೆಗಳು, ಮೊಣಕಾಲು, ಮೊಣಕೈ, ಹೊಟ್ಟೆ, ಭುಜ ಹಾಗೂ ತಲೆಗೆ ಹಾನಿಯಾಗದಂತೆ ಬಳಸುವ ಪಟುತ್ವವನ್ನು ದೇವಗೌಡ ತಿಳಿಸಿಕೊಟ್ಟರು.
ಬಿಸಿಗಾಳಿ, ಶೀತಗಾಳಿಯಿಂದ ಆಗುವ ದೇಹದ ಆಲಸ್ಯ, ಖಿನ್ನತೆ, ಗಡಿಯಲ್ಲಿ ಅನುಭವಿಸುವ ಒಂಟಿತನ, ನಿದ್ರಾಹೀನತೆ, ಮಾನಸಿಕ ಗೊಂದಲ ನಿರ್ವಹಿಸುವ ಬಗೆ ಸೈನಿಕರು ವೈದ್ಯಕೀಯವಾಗಿ ತಿಳಿದುಕೊಳ್ಳಬೇಕು. ಸೇವೆಯಿಂದ ನಿರ್ಗಮಿಸುವ ಸೈನಿಕರು ವ್ಯಾಯಾಮವನ್ನು ಒಮ್ಮೆಲೆ ಬಿಡದೇ ಹಂತಹಂತವಾಗಿ ಕಡಿಮೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯೋಧರಿಗೆ ಇದೇ ಸಂದರ್ಭ ಬೋನ್ ಡೆನ್ಸಿಟಿ ತಪಾಸಣೆ ನಡೆಸಲಾಯಿತು. ಕ್ಯಾಪ್ಟನ್ ಹರಿದಾಸ ನವಲೆ, ಕ್ಯಾಪ್ಟನ್ ದಾನೋಜಿ ಜಗದಾಳೆ, ಸುಬೇದಾರ ವಿನೋದ ಪಾಟೀಲ, ಸುಬೇದಾರ ಮಹೇಶ ಅಮರೋಳಕರ ಸೇರಿ 200ಕ್ಕೂ ಹೆಚ್ಚು ಯೋಧರು ಭಾಗವಹಿಸಿದ್ದರು.