ಬೆಳಗಾವಿ-೨೨:ಮೇ 23ರಂದು ಉತ್ತರ ಕನ್ನಡ ಜಿಲ್ಲೆಯ ಉಳವಿ ಚೆನ್ನಬಸವಣ್ಣನವರ ಐಕ್ಯ ಭೂಮಿಯಲ್ಲಿ ಚಳುವಳಿಗಾರ ಸಭೆ ಕರೆದಿದ್ದೇವೆ ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಆರಂಭವಾಗಲಿದೆ. ಮೂರು ವರ್ಷಗಳ ಹೋರಾಟ ತಾರ್ಕಿಕ ಅಂತ್ಯ ಕಾಣಲು, ಮುಂದಿನ ಹೋರಾಟದ ಸ್ವರೂಪ ಬಗ್ಗೆ ಚರ್ಚಿಸಲು ಶರಣ ಕ್ಷೇತ್ರದಲ್ಲಿ ಸಂಕಲ್ಪ ಮಾಡಲಿದ್ದು, 18 ಜಿಲ್ಲೆಗಳಲ್ಲಿ ಹೋರಾಟ ಮುಗಿದ ಬಳಿಕ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಂಗಳವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 12 ಜಿಲ್ಲೆಯಲ್ಲಿ ಈಗಾಗಲೇ ಹೋರಾಟ ಮಾಡಲಾಗಿದ್ದು, ಇನ್ನೂ 18 ಜಿಲ್ಲೆಯಲ್ಲಿ ಬಾಕಿಯಿದೆ. ಆ ನಿಟ್ಟಿನಲ್ಲಿ ಮೇ 23ರಂದು ಉಳವಿಯಲ್ಲಿ ಮೀಸಲಾತಿ ಸಂಕಲ್ಪ ಸಭೆ ನಡೆಯಲಿದ್ದು, ರಾಜ್ಯದ ಎಲ್ಲಾ ಮುಖಂಡರು ಸಭೆಯಲ್ಲಿ ಭಾಗವಹಿಸಬೇಕು. ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ ಈ ವೇಳೆ ತೀರ್ಮಾನ ಮಾಡುತ್ತೇವೆ. ಮೇ 24ರಂದು ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ನೆರವೇರಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗನಿಂದ ಮೀಸಲಾತಿ ಹೋರಾಟ ಸ್ಪಂದನೆ ನೀಡದೆ ಹಿನ್ನೆಲೆಯಲ್ಲಿ ಹೊಸ ಸರ್ಕಾರ ಬಂದಾಗ ಶಾಂತವಾಗಿ ಹೋರಾಟ ಮಾಡಿದ್ದೇವು. 18 ಜಿಲ್ಲೆಗಳ ಹೋರಾಟ ಮುಗಿದ ಬಳಿಕ ನಮ್ಮ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ. ಕಾಂಗ್ರೆಸ್ ಬಗ್ಗೆ ಮೃದು ಧೋರಣೆ ಇಲ್ಲ. ಇನ್ನು ಸಚಿವರು, ಶಾಸಕರು ರಾಜೀನಾಮೆ ಕೊಡುವುದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಗೆದ್ದ 12 ಜನ ಶಾಸಕರು ಈಗ ಧ್ವನಿ ಎತ್ತಬೇಕು.
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಯಾವುದೇ ಸ್ಪಂದನೆ ಸಿಗದ ನೋವು ನಮ್ಮಲ್ಲಿ ಇದೆ ಎಂದು ಬಸವಜಯ ಸ್ವಾಮೀಜಿ ಬೇಸರ ಹೊರ ಹಾಕಿದರು.
ಹೆಬ್ಬಾಳ್ಕರ್ ಬಹಿರಂಗವಾಗಿ ಸಮಾವೇಶ ಬಂದಿಲ್ಲ.
ಬದಲಾಗಿ ಸಿಎಂ ಮೇಲೆ ಒತ್ತಡ ತರುವ ಪ್ರಯತ್ನ ಮಾಡಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯ ಇರಬಹುದು.
ಎಲ್ಲಾ ಸಮುದಾಯಗಳಲ್ಲಿ ಭಿನ್ನಾಭಿಪ್ರಾಯ ಸಹಜ. ಮೀಸಲಾತಿ ವಿಚಾರದಲ್ಲಿ ಯಾರು ರಾಜಕೀಯ ಮಾಡಿಲ್ಲ.
ಹೆಬ್ಬಾಳ್ಕರ್ ನಡೆಯನ್ನು ನಾವು ಎಲ್ಲರೂ ಮೆಚ್ಚಬೇಕು.
ಅಧಿವೇಶನದಲ್ಲಿ ಧ್ವನಿ ಎತ್ತಲು ಎಲ್ಲಾ ಸಿದ್ದತೆ ಮಾಡಿದ್ದರು. ಆದರೆ, ಪಾಕ್ ಪರ ಘೋಷಣೆ ಪ್ರಕರಣ ಬಂದು ಮುಂದೆ ಹೋಯಿತು. ಮುಂದಿನ ಅಧಿವೇಶನದಲ್ಲಿ ನಮ್ಮ ಶಾಸಕರು ಧ್ವನಿ ಎತ್ತಬೇಕು. ನಮ್ಮ ನೋವು ಮುಂದಿನ ದಿನಗಳಲ್ಲಿ ವ್ಯಕ್ತ ಪಡಿಸುತ್ತೇವೆ. ಯಾವ ಸಮಾಜದಿಂದ ಅಧಿಕಾರಕ್ಕೆ ಬಂದಿದ್ದಾರೆ. ಅವರ ಋಣ ತೀರಿಸುವ ಬಗ್ಗೆ ಕಾಳಜಿ ಇರಬೇಕು ಎನ್ನುವ ಮೂಲಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ಹೊರ ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಕೆ.ಪಾಟೀಲ,ರಾವಸಾಹೇಬ ಪಾಟೀಲ್, ಮುಖಂಡರಾದ ಗುಂಡು ಪಾಟೀಲ, ರಾಜು ಬಾಗೇವಾಡಿ, ರಾಜು ಮಗದುಮ್ಮ ಸೇರಿ ಮತ್ತಿತರರು ಉಪಸ್ಥಿತಿರಿದ್ದರು.