ಬೆಳಗಾವಿ-೨೨: ಮನುಷ್ಯನಲ್ಲಿ ಉತ್ತಮ ಸಂಸ್ಕಾರಗಳಿದ್ದರೆ ಸಮಾಜದಲ್ಲಿ ಉತ್ತಮ ಕಾರ್ಯಗಳಾಗುತ್ತವೆ. ಹಾಗಾಗಿ ಇಂದಿನ ಯುವ ಪೀಳಿಗೆಗೆ ಉತ್ತಮ ಶೀಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಸಹ ನೀಡುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಕೊಲ್ಲಾಪೂರ ಜೈನ ಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮಿಜೀಗಳು ಅಭಿಪ್ರಾಯಪಟ್ಟರು.
ಇದೇ ಮೇ 19 ರವಿವಾರದಂದು ನಿಪ್ಪಾಣಿ ಸಮೀಪದ ಶ್ರೀ ಕ್ಷೇತ್ರ ಸ್ತವನಿಧಿಯಲ್ಲಿ ಶಾಸಕ ಅಭಯ ಪಾಟೀಲ ಹಾಗೂ ಅವರ ಬಂಧುಗಳಿಂದ ನೂತನವಾಗಿ ನಿರ್ಮಿಸಲಾದ ಶ್ರೀಮತಿ ಮಾಲಿನಿ ಪಾಟೀಲ ಕಲ್ಯಾಣ ಮಂಟಪವನ್ನು ಉದ್ಘಾಟಿಸಿ ಆರ್ಶಿವಚನ ನೀಡಿದ ಶ್ರೀಗಳು, ಅಭಯ ಪಾಟೀಲ ಹಾಗೂ ಅವರ ಸಹೋದರರಿಗೆ ಅವರ ತಂದೆ ತಾಯಿಂದರು ಉತ್ತಮ ಸಂಸ್ಕಾರ ನೀಡಿದ್ದಾರೆ. ಈ ಸಂಸ್ಕಾರದ ಪರಿಣಾಮದಿಂದಲೇ ಇಂದು ಪಾಟೀಲ ಸಹೋದರರು ತಮ್ಮ ಮಾತೋಶ್ರೀ ಅವರ ಸ್ಮರಣಾರ್ಥ ಮಹಾರಾಷ್ಟ್ರದ ಇಬ್ರಾಹಿಂಪೂರದಲ್ಲಿ ಯಾತ್ರಿ ನಿವಾಸ , ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಕಲ್ಯಾಣ ಮಂಟಪ ಹಾಗೂ ಇದೀಗ ಶ್ರೀ ಕ್ಷೇತ್ರ ಸ್ತವನಿಧಿಯಲ್ಲಿ ಕಲ್ಯಾಣ ಮಂಟಪಗಳನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಣೆ ಮಾಡಿದ್ದಾರೆ.ಇಂತಹ ಕಾರ್ಯಗಳಿಗೆ ತಂದೆ-ತಾಯಿ ಮತ್ತು ಗುರುಗಳ ಆರ್ಶಿವಾದ ಸದಾ ಇರಬೇಕಾಗುತ್ತದೆ . ಆಗ ಮಾತ್ರ ಇಂತಹ ಸಮಾಜಮುಖಿ ಕಾರ್ಯಗಳು ನಡೆಯುತ್ತವೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ , ಮಾಜಿ ಶಾಸಕರಾದ ಸಂಜಯ ಪಾಟೀಲ, ಕಲ್ಲಪ್ಪಣ್ಣ ಮಗೆನ್ನವರ, ಮೋಹನ ಶಹಾ ಹಾಗೂ ಜೈನ ಸಮಾಜದ ಯುವ ಧುರೀಣ ಉತ್ತಮ ಪಾಟೀಲ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಅಭಯ ಪಾಟೀಲ ಮತ್ತು ಅವರ ಸಹೋದರರು ಸಮಾಜಕ್ಕೆ ಒಂದು ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ. ಇಂತಹ ಕಾರ್ಯಗಳು ಬೇರೆಯವರಿಗೂ ಪ್ರೇರಣೆ ನೀಡುತ್ತವೆ. ಕುಟುಂಬ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಸಂದೇಶವನ್ನು ನೀಡುವ ಕಾರ್ಯವನ್ನು ಪಾಟೀಲ ಸಹೋದರರು ಮಾಡಿದ್ದಾರೆ. ಅವರ ಈ ಕಾರ್ಯ ನಮಗೆಲ್ಲರಿಗೂ ಹಾಗೂ ಸಮಾಜಕ್ಕೆ ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ ಅವರು ಮಾತನಾಡಿ, ಕಳೆದ 25 ವರ್ಷಗಳಿಂದ ಪಾಟೀಲ ಮನೆತನದೊಂದಿಗೆ ಒಡನಾಟ ಹೊಂದಿದ್ದು, ಈ ಕುಟುಂಬ ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿದ್ದೇನೆ. ಇಂದು ಪಾಟೀಲ ಮನೆತನ ನಮ್ಮ ಜೈನ ಸಮಾಜಕ್ಕೆ ಹೆಮ್ಮೆಯ ಮನೆತನವಾಗಿದೆ ಎಂದು ಅವರು ಹೇಳಿದರು.
ಶಾಸಕ ಅಭಯ ಪಾಟೀಲ ಅವರು ಮಾತನಾಡಿ, ಚಿಕ್ಕದಿನಿಂದಲೂ ನಮ್ಮ ಪಾಲಕರು ನಮಗೆ ಒಳ್ಳೆಯದನ್ನು ಕಲಿಸಿಕೊಟ್ಟಿದ್ದಾರೆ. ಧರ್ಮ ಸಮಾಜದ ಬಗ್ಗೆ ತಿಳಿವಳಿಕೆ ನೀಡಿದ್ದಾರೆ. ಅವರ ಆರ್ಶಿವಾದ ಹಾಗೂ ಅವರು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ಇಂದು ಮುನ್ನಡೆಯುತ್ತಿದ್ದೇವೆ. ನಮ್ಮ ಪಾಲಕರ ಆರ್ಶಿವಾದವೇ ನಮಗೆಲ್ಲ ಪ್ರೇರಣೆಯಾಗಿದೆ ಎಂದು ಅವರು ಹೇಳಿದರು. ಸಮಾರಂಭದ ವೇದಿಕೆ ಮೇಲೆ ಭರತೇಶ ಶೀಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ , ವಾಸ್ತು ಶಾಸ್ತ್ರಜ್ಞ ಬಾಹುಬಲಿ ಗಡಕರಿ ಹಾಗೂ ಶ್ರೀ. ಆಚಾರ್ಯ ರತ್ನ ದೇಶಭೂಷಣ ದಿಗಂಬರ ಜೈನ ವಿದ್ಯಾಪೀಠ ಅತಿಶಯ ಕ್ಷೇತ್ರ ಸ್ತವನಿಧಿ ಆಡಳಿತ ಮಂಡಳಿಯ ಸದಸ್ಯರು ಮೊದಲಾದವರು ಹಾಜರಿದ್ದರು.