ಬೆಳಗಾವಿ-೧೬:ಬೆಳಗಾವಿ ವಿಭಾಗದ ಪ್ರಾದೇಶಿಕ ಭೂದಾಖಲೆಗಳ ಜಂಟಿ ನಿರ್ದೇಶಕರಾದ ಶ್ರೀಮತಿ ನಜ್ಮಾ ಪೀರಜಾದೆ ಇವರ ಅಧ್ಯಕ್ಷತೆಯಲ್ಲಿ ಬೆಳಗಾವಿ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ಎದುರಿಸುತ್ತಿರುವ ಒತ್ತಡ, ನಿವಾರಣೆ ಕುರಿತು ಕೆಎಲ್‌ಇ ಅಕ್ಯಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಜವಾಹರಲಾಲ ನೆಹರೂ ಮೆಡಿಕಲ್ ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ವಿಭಾಗದ ಸಹಪ್ರಾಧ್ಯಾಪಕರು ಹಾಗೂ ಯುವ ರೆಡ್ ಕ್ರಾಸ್ ಮುಖ್ಯಸ್ಥರಾದ ಡಾ. ಅವಿನಾಶ ಕವಿ ಎಂಬಿಬಿಎಸ್, ಎಂಡಿ, ಡಿಎನ್‌ಬಿ ಮತ್ತು ವೈದ್ಯ ವಿಧ್ಯಾರ್ಥಿಗಳಿಂದ ಕಾರ್ಯಾಗಾರವನ್ನು ಬೆಳಗಾವಿಯ ಹಳೆಯ ಜಿಲ್ಲಾ ಪಂಚಾಯತಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿತ್ತು. ಡಾ. ಅವಿನಾಶ ಕವಿ ಇವರು ಮಾನಸಿಕ ಒತ್ತಡ, ನಿವಾರಣೆ, ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ, ಸ್ಥೂಲಕಾಯ ಇತ್ಯಾದಿಗಳ ನಿರ್ವಹಣೆ ಕುರಿತು ಅಗತ್ಯವಾದ ಮಾಹಿತಿಯನ್ನು ಸಂಶೋಧನಾ ಅಂಕಿ ಅಂಶಗಳ ಮುಖಾಂತರ ಎಲ್ಲರಿಗೂ ಮನದಟ್ಟಾಗುವಂತೆ ವಿವರಿಸಿದರು. ಮುಂದುವರೆದು ಅನಾರೋಗ್ಯಕರ ಜೀವನ ಶೈಲಿಯಿಂದಾಗಿ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇರುತ್ತವೆ. ಅತಿಯಾದ ಆಸಿಸ್ತು, ಕೆಲಸದ ಒತ್ತಡ, ಹೆಚ್ಚಿನ ಕೆಲಸ ಮತ್ತು ಸೋಮಾರಿತನದ ಜೀವನಶೈಲಿಯಿಂದಾಗಿ ಅನೇಕ ಜನರು ಹಲವಾರು ತೀವ್ರತರವಾದ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪ್ರಮುಖವಾಗಿ ನಾವು ಅಳವಡಿಸಿಕೊಂಡಿರುವ ಜೀವನಶೈಲಿ ಮತ್ತು ಆಹಾರಶೈಲಿ ಪ್ರಮುಖ ಕಾರಣವಾಗಿರುತ್ತದೆ. ಜನರು ನಿಯಮಿತವಾಗಿ ಆಹಾರ ಸೇವನೆ ಮಾಡದೇ, ಸಿಕ್ಕ ಸಮಯದಲ್ಲಿ ಅನಿಯಮಿತವಾಗಿ ಆಹಾರ ಸೇವನೆ ಮಾಡುವುದು ಅಥವಾ ನಿದ್ದೆ ಮಾಡುತ್ತ ಜೀವನವನ್ನು ಮುಂದುವರೆಸಿದ ಕಾರಣದಿಂದಾಗಿ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಹಾರ ಕ್ರಮದಲ್ಲಿ ಪೋಷಕಾಂಶದ ಕೊರತೆ, ಕ್ರಿಯಾಶೀಲತೆ ಕಡಿಮೆಯಾಗಿರುವುದು ಸಹ ಮನುಷ್ಯನ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇವು ಮುಂದುವರೆದು ಜನರಲ್ಲಿ ವಿಶೇಷವಾಗಿ ಸ್ನಾಯುಗಳ ನೋವಿಗೆ ಕಾರಣವಾಗುತ್ತವೆ. ಕಳೆದ ಕೆಲವು ವರ್ಷಗಳಿಂದ ಎಲ್ಲ ವಯೋಮಾನದವರಲ್ಲಿ ಜಡಜೀವನ ಶೈಲಿಯಿಂದಾಗಿ ಅನೇಕ ಸಮಸ್ಯೆಗಳು ಉಂಟಾಗಿರುತ್ತವೆಯೆಂದು ತಜ್ಞರು ಅಭಿಪ್ರಾಯ ಪಟ್ಟಿರುತ್ತಾರೆಂದು ಅಂಕಿ ಅಂಶಗಳ ಮೂಲಕ ವಿಸ್ತೃತವಾಗಿ ತಿಳಿಸಿದರು. ಈ ಬಗ್ಗೆ ಇಂದೋರಿನ ಪಿಜಿಯೋಥೆರೆಪಿಸ್ಟ ಡಾ:ಸಂಧ್ಯಾ ನವನಿ ಎಂಬುವವರು ದೀರ್ಘಕಾಲ ಸಂಶೋಧನೆ ನಡೆಸಿ ಸ್ನಾಯುನೋವು, ಸ್ನಾಯುಬಿಗಿತ ಎಲ್ಲ ವಯೋಮಾನದವರಲ್ಲಿ ಸಾಮಾನ್ಯವಾಗಿ ಕಂಡು ಬಂದು ಪ್ರಮುಖವಾಗಿ ಭುಜ, ಕತ್ತು ಮತ್ತು ಕಾಲುಗಳಲ್ಲಿ ಸ್ನಾಯು ಬಿಗಿತದ ಸಮಸ್ಯೆ ತೀವ್ರವಾಗಿರುತ್ತದೆ. ಕೆಲವೊಮ್ಮೆ ಈ ಸಮಸ್ಯೆ ಮನುಷ್ಯನ ದೈನಂದಿನ ಜೀವನಕ್ರಮದ ಮೇಲೆ ಅತಿ ಕೆಟ್ಟ ಪರಿಣಾಮವನ್ನು ಉಂಟು ಮಾಡಿ ಗುರುತರವಾದ ಸಮಸ್ಯೆಯನ್ನು ಎದುರಿಸುವಂತೆ ಮಾಡುತ್ತದೆ. ಇದಕ್ಕೆ ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಜನರು ಅಳವಡಿಸಿಕೊಂಡಿರುವ ಜೀವನಶೈಲಿ ಪ್ರಮುಖ ಕಾರಣವಾಗಿರುತ್ತದೆ. ಜನರು ತಮ್ಮ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳದ ಹೊರತು ಆರೋಗ್ಯಕರ ಜೀವನ ನಡೆಸಲು ಸಾಧ್ಯವಿಲ್ಲವೆಂದು ಡಾ: ಅವಿನಾಶ ಕವಿ ಇವರು ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿ ಸಿಬ್ಬಂದಿಗಳಿಗೆ ತಿಳಿಸಿದರು. ಇಂದಿನ ಸ್ಫರ್ಧಾತ್ಮಕ ಜಗತ್ತಿನಲ್ಲಿ ಅನಿವಾರ್ಯವಾಗಿ ಮನುಷ್ಯ ಸತತವಾಗಿ ತನ್ನನ್ನು ಕೆಲಸಕ್ಕೆ ತೊಡಗಿಸಿಕೊಳ್ಳುವ ಮೂಲಕ ದೈಹಿಕ ಶ್ರಮದಿಂದ ದೂರ ಉಳಿದಿರುತ್ತಾರೆ. ಕೆಲಸದ ಅವಧಿಯನ್ನು ಹೊರತುಪಡಿಸಿ ಯಾವುದೇ ದೈಹಿಕ ಶ್ರಮದ ಕೆಲಸ ಮಾಡದೇ ಟಿವಿ ಮತ್ತು ಮೊಬೈಲ್ ವೀಕ್ಷಣೆಗೆ ಹೆಚ್ಚಿನ ಸಮಯವನ್ನು ವ್ಯಯ ಮಾಡುತ್ತಿದ್ದಾನೆ. ಇದರಿಂದ ಮನುಷ್ಯರಿಗೆ ಬೇಕಾದ ಕನಿಷ್ಠ ಅವಧಿಯ ನಿದ್ರೆಯನ್ನು ಸಹ ಕಳೆದುಕೊಂಡಿರುತ್ತಾರೆ. ದೇಹದ ಅಂಗಗಳಿಗೆ ಸರಿಯಾದ ಚಲನೆ ಇಲ್ಲದೇ ಜಡಜೀವನ ಶೈಲಿಯಿಂದಾಗಿ ಸ್ಥೂಲಕಾಯ ಹೊಂದುವ ಮೂಲಕ ಮಧುಮೇಹ, ಹೃದಯ ಸಂಬಂಧಿ ಖಾಯಿಲೆಗಳಿಗೆ ತಾನೇ ಸ್ವತ: ಆಹ್ವಾನವನ್ನು ನೀಡುತ್ತಿರುವುದು ತೀರಾ ವಿಷಾಧನೀಯ ಸಂಗತಿಯಾಗಿರುತ್ತದೆ. ಇವೆಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ವೈದ್ಯರು ಚಲನೆ ಎಂಬ ದಿವ್ಯಮಂತ್ರವನ್ನು ನಮ್ಮ ಜೀವನಕ್ರಮದಲ್ಲಿ ಅಳವಡಿಸಿಕೊಂಡರೆ ಆರೋಗ್ಯಕರ ಬದುಕನ್ನು ಜೀವಿಸಬಹುದೆಂದು, ನಿಯಮಿತವಾಗಿ ಯೋಗಾಸನ ಮಾಡುವುದರಿಂದ ಜಡಜೀವನಶೈಲಿಂದಾಗಿ ಉಂಟಾಗುವ ಸಮಸ್ಯೆಗಳಿಂದ ಪಾರಾಗಲು ಸಾಧ್ಯವೆಂದು ಮತ್ತು ಸುಖಕರ ಜೀವನವನ್ನು ನಡೆಸಬಹುದಾಗಿದೆ ಎಂದು ವೈದ್ಯರು ತಿಳಿಸಿದರು. ಈ ಕಾರ್ಯಾಗಾರದಲ್ಲಿ ಬೆಳಗಾವಿ ವಿಭಾಗದ ಬೆಳಗಾವಿ, ವಿಜಯಪುರ, ಬಾಗಲಕೋಟಿ, ಗದಗ, ಹಾವೇರಿ ಮತ್ತು ಉತ್ತರಕನ್ನಡ ಜಿಲ್ಲೆಗಳ ಭೂಮಾಪನ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.