ಬೆಂಗಳೂರು-೧೪: ಕೋವಿಶೀಲ್ಡ್ ಲಸಿಕೆ ಪಡೆದವರು ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳನ್ನು ಸೇವಿಸಬಾರದು. ಸೇವಿಸಿದರೆ ಹೃದಯನಾಳದಲ್ಲಿ ರಕ್ತ ಹೆಪ್ಪುಗಟ್ಟಿ ಸಾವು ಸಂಭವಿಸಬಹುದು ಎಂಬ ಸುದ್ದಿ ಸುಳ್ಳು ಎಂದು ಆರೋಗ್ಯ ಇಲಾಖೆ ಶನಿವಾರ ಸ್ಪಷ್ಟ ಮಾಹಿತಿ ನೀಡಿದೆ.
ಕೊರೊನಾ ಸಂದರ್ಭದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದವರು ಫ್ರಿಜ್ ನೀರು, ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳನ್ನು ಕುಡಿಯಬಾರದು ಎಂದು ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ಕಾಲೇಜಿನ ನೋಟಿಸ್ ವೈರಲ್ ಆಗಿತ್ತು. ಇದಕ್ಕೆ ಆರೋಗ್ಯ ಇಲಾಖೆ ಇಂದು ಸ್ಪಷ್ಟನೆ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ರೀತಿಯ ಸುದ್ದಿ ಸುಳ್ಳಾಗಿದ್ದು, ಇಂತಹ ಯಾವುದೇ ಸುತ್ತೋಲೆ ಇಲಾಖೆ ಹೊರಡಿಸಿಲ್ಲ. ಗಾಬರಿಗೊಳ್ಳದಿರಿ, ತಪ್ಪು ಮಾಹಿತಿ ಬಗ್ಗೆ ಜಾಗೃತಿ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ರೀತಿ ಸೂಚನೆ ನೀಡಿರುವ ಕಾಲೇಜುಗಳಿಗೆ ಕಾರಣ ಕೇಳಿ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ ಎಂದು ತಿಳಿಸಿರುತ್ತಾರೆ.