23/12/2024
FB_IMG_1715106005827

ಬೆಳಗಾವಿ ಜಿಲ್ಲೆಯಲ್ಲಿ ಶೇ.74.87 ರಷ್ಟು ಮತದಾನ

ಬೆಳಗಾವಿ-೦೭: ಪ್ರಜಾಪ್ರಭುತ್ವದ ಹಬ್ಬವಾಗಿರುವ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು, ಮೂರು ಲೋಕಸಭಾ ಮತಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ ಶೇ.74.87 ರಷ್ಟು ಮತದಾನವಾಗಿರುತ್ತದೆ.

01- ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಶೇ.78.51 ಮತ್ತು 02-ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಶೇ.71.38ರಷ್ಟು ಮತದಾನವಾಗಿರುತ್ತದೆ. ಇದಲ್ಲದೇ ಕೆನರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.73.87 ಮತ್ತು ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 76.25 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮತದಾನ‌ ಪ್ರಮಾಣ ಹೆಚ್ಚಳ:

ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ‌ 2019 ರಲ್ಲಿ ಶೇ.75.52 ರಷ್ಟು ಮತದಾನವಾಗಿದ್ದರೆ 2024 ರಲ್ಲಿ ಶೇ.78.51 ರಷ್ಟು ಮತದಾನವಾಗುವ ಮೂಲಕ ಪ್ರತಿಶತ 3 ರಷ್ಟು ಹೆಚ್ಚಳವಾಗಿರುತ್ತದೆ.
ಅದೇ ರೀತಿ‌ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 2019 ರ‌ ಚುನಾವಣೆಯಲ್ಲಿ‌ ಶೇ. 67.70 ರಷ್ಟು‌ ಮತದಾನವಾಗಿತ್ತು. ಈ ಬಾರಿ 2024 ರಲ್ಲಿ ಶೇ.71.38 ರಷ್ಟು ಮತದಾನವಾಗುವ ಮೂಲಕ ಪ್ರತಿಶತ‌ 4 ರಷ್ಟು ಹೆಚ್ಚಳವಾಗಿರುತ್ತದೆ ಎಂದು ನಿತೇಶ್‌ ಪಾಟೀಲ‌ ತಿಳಿಸಿದ್ದಾರೆ.
ಅಂತಿಮ ವರದಿ‌ ಬಳಿಕ‌ ಮತದಾನದ‌ ಒಟ್ಟಾರೆ ಪ್ರಮಾಣದಲ್ಲಿ‌ ಸ್ವಲ್ಪಮಟ್ಟಿಗೆ ಹೆಚ್ಚಳವಾಗಬಹುದು.

ಬೆಳಿಗ್ಗೆ 7 ಗಂಟೆಯಿಂದ ಸಂಜೆ‌ 6 ಗಂಟೆಯವರೆಗೆ ಮತದಾನ ನಡೆಯಿತು. ಕೆಲವು ಕಡೆಗಳಲ್ಲಿ 6 ಗಂಟೆಯ‌ ಒಳಗೆ ಮತಗಟ್ಟೆಯ ಸರದಿಯಲಿದ್ದ ಮತದಾರರಿಗೆ ಟೋಕನ್‌ ವಿತರಿಸಿದ ಬಳಿಕ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.
ಜಿಲ್ಲೆಯ ಎಲ್ಲ ಕಡೆಗಳಲ್ಲೂ ಮತದಾನ ಶಾಂತಿಯುತವಾಗಿ ನಡೆದಿರುತ್ತದೆ.

ಅಂತರ್ ರಾಷ್ಟ್ರೀಯ ನಿಯೋಗದ ಭೇಟಿ:

ಭಾರತ ದೇಶದ ಚುನಾವಣಾ ಪ್ರಕ್ರಿಯೆ ವೀಕ್ಷಣೆಗೆ ಆಗಮಿಸಿರುವ ಐದು ದೇಶಗಳ ಚುನಾವಣಾ ಆಯೋಗಗಳ ಹತ್ತು ಜನ ಅಂತರ್ ರಾಷ್ಟ್ರೀಯ ನಿಯೋಗದ‌ ಸದಸ್ಯರು ನಸುಕಿನ ಜಾವದಿಂದಲೇ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ವೀಕ್ಷಿಸಿದರು.

ಬೆಳಗಾವಿ ಜಿಲ್ಲೆಗೆ ಆಗಮಿಸಿದ ಕಾಂಬೋಡಿಯಾ, ನೇಪಾಳ, ಮೊಲ್ಡೊವಾ, ಸಿಷೆಲ್ ಹಾಗೂ ತುನಿಷಿಯಾ ದೇಶಗಳ ಚುನಾವಣಾ ಆಯೋಗಗಳ ಹತ್ತು ಸದಸ್ಯರ ತಂಡವು ವಾಸ್ತವ ಮತದಾನ‌ ಆರಂಭಕ್ಕಿಂತ ಮುಂಚೆ‌ ನಡೆಯುವ ಅಣಕು ಮತದಾನ ಪ್ರಕ್ರಿಯೆಯನ್ನು ಕೂಡ ವೀಕ್ಷಿಸಿದರು.
ಇದಲ್ಲದೇ ಸಖಿ‌ ಮತಗಟ್ಟೆ(ಪಿಂಕ್ ಬೂತ್) ಸೇರಿದಂತೆ ವಿವಿಧ ಮತಟಗಟ್ಟೆಗಳಿಗೂ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ಸಾಮಾನ್ಯ ವೀಕ್ಷಕರು ಹಾಗೂ ಚುನಾವಣಾಧಿಕಾರಿಗಳ ನಿಗಾ:

ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಸಾಮಾನ್ಯ ವೀಕ್ಷಕರಾದ ಎಂ.ಕೆ.ಅರವಿಂದ ಕುಮಾರ್ ಹಾಗೂ ಜಿ.ಎಸ್.ಪಾಂಡಾ ದಾಸ್ ಅವರು‌ ಕೂಡ ವಿವಿಧ ಮತಗಟ್ಟೆಗಳಿಗೆ‌ ಭೇಟಿ ನೀಡಿ ಮತದಾನ ಸುಗಮ ಹಾಗೂ ಶಾಂತಿಯುತವಾಗಿರುವ ಬಗ್ಗೆ ಖಚಿತಪಡಿಸಿಕೊಂಡರು.
ಇದಲ್ಲದೇ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆಯ ಮೂಲಕ ಸೂಕ್ಷ್ಮ ಮತಗಟ್ಟೆಗಳಲ್ಲಿ ನಡೆದ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ನಿತೇಶ್ ಪಾಟೀಲ ಮತ್ತು ಚಿಕ್ಕೋಡಿ ಕ್ಷೇತ್ರದ ಚುನಾವಣಾಧಿಕಾರಿ ರಾಹುಲ್ ಶಿಂಧೆ ಅವರು ಕೂಡ ಮತಗಟ್ಟೆಗಳಿಗೆ‌ ಭೇಟಿ ನೀಡಿ, ಮತದಾರರಿಗೆ ಒದಗಿಸಲಾಗಿರುವ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.

ಜಿಲ್ಲೆಯಲ್ಲಿ ನಡೆದ ಮತದಾನ ವಿವರ:

* ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ ಶೇ.ಶೇ.71.38 ರಷ್ಟು ಮತದಾನವಾಗಿರುತ್ತದೆ.
ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.71.92, ಗೋಕಾಕ‌ ಶೇ.71.06 ಬೆಳಗಾವಿ(ಉತ್ತರ) ಶೇ.63.42 ಬೆಳಗಾವಿ(ದಕ್ಷಿಣ) ಶೇ.67.52 ಬೆಳಗಾವಿ(ಗ್ರಾಮೀಣ) ಶೇ.76.87 ಬೈಲಹೊಂಗಲ ಶೇ.73.5 ಸವದತ್ತಿ-ಯಲ್ಲಮ್ಮ ಶೇ.76.73 ಹಾಗೂ ರಾಮದುರ್ಗ ಶೇ.73.6 ಮತದಾನ ಆಗಿರುತ್ತದೆ.

* ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ ಶೇ.78.51 ಮತದಾನವಾಗಿರುತ್ತದೆ.
ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 79.73, ಚಿಕ್ಕೋಡಿ-ಸದಲಗಾ ಶೇ. 79.58 ಅಥಣಿ ಶೇ.78.66 ಕಾಗವಾಡ ಶೇ.78.84 ಕುಡಚಿ ಶೇ. 74.74 ರಾಯಬಾಗ ಶೇ.75.8 ಹುಕ್ಕೇರಿ ಶೇ.78.35 ಹಾಗೂ ಯಮಕನಮರಡಿ ಶೇ.82.14 ರಷ್ಟು ಮತದಾನ ಆಗಿರುತ್ತದೆ.

ಮತಯಂತ್ರಗಳು‌ ಸ್ಟ್ರಾಂಗ್ ರೂಮ್ ನಲ್ಲಿ ಭದ್ರ:

ಮತದಾನದ ಬಳಿಕ ಚುನಾವಣಾ ಸಿಬ್ಬಂದಿಯು ತಮ್ಮ ತಮ್ಮ ಮತಗಟ್ಟೆಗಳಿಂದ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪೊಲೀಸ್ ಭದ್ರತೆಯೊಂದಿಗೆ ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಡಿಮಸ್ಟ ರಿಂಗ್ ಕೇಂದ್ರಗಳಿಗೆ ರಾತ್ರಿಯವರೆಗೆ ತಲುಪಿಸಿದರು.

ಡಿಮಸ್ಟರಿಂಗ್ ಕೇಂದ್ರಗಳಿಂದ ಮತ ಎಣಿಕೆ‌ ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಮ್ ಗಳಿಗೆ‌ ಮಧ್ಯರಾತ್ರಿಯವರೆಗೆ ಮತಯಂತ್ರಗಳನ್ನು ಕಳುಹಿಸಲಾಯಿತು.

ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರವನ್ನು ಬೆಳಗಾವಿ ನಗರದ ಆರ್.ಪಿ.ಡಿ. ಮಹಾವಿದ್ಯಾಲಯದಲ್ಲಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರವನ್ನು ಚಿಕ್ಕೋಡಿ‌ ನಗರದ ಆರ್.ಡಿ.ಕಾಲೇಜಿನಲ್ಲಿ ಸ್ಥಾಪಿಸಲಾಗಿರುತ್ತದೆ.
ಆಯಾ ಮತ ಎಣಿಕೆ‌ ಕೇಂದ್ರಗಳ ಸ್ಟ್ರಾಂಗ್ ರೂಮ್ ಗಳಲ್ಲಿ ಮತಯಂತ್ರಗಳನ್ನು ಇರಿಸಲಾಗಿರುತ್ತದೆ. ಜೂನ್ 4 ರಂದು‌ ಮತ‌ ಎಣಿಕೆ ನಡೆಯಲಿದೆ.

ಜಿಲ್ಲೆಯ‌ ಜನತೆಗೆ ಕೃತಜ್ಞತೆ:

ಲೋಕಸಭೆ‌ ಚುನಾವಣೆಯನ್ನು ಅತ್ಯಂತ‌ ಶಾಂತಿಯುತ ಹಾಗೂ ಸುಗಮವಾಗಿ ನಡೆಸಲು ಸಹಕರಿಸಿದ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರಿಗೆ, ಜನಪ್ರತಿನಿಧಿಗಳು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಕಂದಾಯ, ಜಿಲ್ಲಾ ಪಂಚಾಯತಿ ಹಾಗೂ ಪೊಲೀಸ್ ಸೇರಿದಂತೆ ಪ್ರತಿಯೊಂದು ಇಲಾಖೆಗಳ ಅಧಿಕಾರಿಗಳು/ಸಿಬ್ಬಂದಿ, ಸ್ವೀಪ್ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮತದಾನ ಹೆಚ್ಚಳಕ್ಕೆ ಕೈಜೋಡಿಸಿದ ಸಂಘ-ಸಂಸ್ಥೆಗಳು ಹಾಗೂ ಮಾಧ್ಯಮ‌ ಪ್ರತಿನಿಧಿಗಳಿಗೆ ಜಿಲ್ಲಾ‌ ಚುನಾವಣಾಧಿಕಾರಿ ನಿತೇಶ್ ಪಾಟೀಲ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ರಾಹುಲ್‌ ಶಿಂಧೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

error: Content is protected !!