23/12/2024

ಬೆಳಗಾವಿ-31 : ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಪ್ರೊ.ಎಂ.ಎಸ್.ಇಂಚಲ ಹಾಗೂ ಸುಭಾಷ ಏಣಗಿಯವರ ಕೊಡುಗೆ ಅನನ್ಯವಾಗಿದೆ. ಸಮಾಜವು ಅವರ ಸೇವೆಗೆ ಉಪಕೃತವಾಗಿದೆ ಎಂದು ನಿಡಸೋಸಿ ಸಿದ್ಧಸಂಸ್ಥಾನಮಠದ ಪೂಜ್ಯ ಜಗದ್ಗುರು ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು ನುಡಿದರು.

ಅವರು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಎಸ್.ಜಿ.ಬಿ.ಟಿ.ಆಯ್ ಸಭಾಗೃಹದಲ್ಲಿ ಆಯೋಜಿಸಿದ್ದ ಪ್ರೊ. ಎಂ. ಎಸ್. ಇಂಚಲ ಹಾಗೂ ಸುಭಾಷ ಏಣಗಿ ಅಮೃತ ಮಹೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಇರ್ವರ ಪೂಜ್ಯ ತಂದೆಯವರು ಕೂಡ ಸಮಾಜದ ಗೌರವಾನ್ವಿತ ವ್ಯಕ್ತಿಗಳಾಗಿದ್ದ ಸಮಾಜಮುಖಿಗಳಾಗಿ ಬದುಕಿದ್ದರು ಎಸ್.ಡಿ.ಇಂಚಲರ ಸುಪುತ್ರರಾದ ಪ್ರೊ.ಎಂ.ಎಸ್.ಇಂಚಲರು ಹಾಗೂ ಖ್ಯಾತ ರಂಗಕಲಾವಿದರಾದ ನಾಡೋಜ ಏಣಗಿ ಬಾಳಪ್ಪನವರ ಮಗ ಸುಭಾಷ ಏಣಗಿಯವರು ಕೂಡ ತಂದೆಯವರ ಪಥದಲ್ಲಿಯೇ ಸಾಗಿದ ಸಮಾಜಕ್ಕೆ ಬಹುನೆಲೆಗಳಲ್ಲಿ ಸೇವೆಯನ್ನು ಸಲ್ಲಿಸಿರುವುದು ಅಭಿನಂದನೀಯವೆAದು ಹೇಳಿದರು.
ಸಾನ್ನಿಧ್ಯವಹಿಸಿದ ಗದಗ ತೋಂಟದಾರ್ಯ ಶ್ರೀಮಠದ ಜಗದ್ಗುರು ಡಾ.ಸಿದ್ಧರಾಮ ಮಹಾಸ್ವಾಮೀಜಿಯವರು ಏಣಗಿ ಹಾಗೂ ಇಂಚಲ ಇರ್ವ ಕುಟುಂಬ ನಾಡಿಗೆ ನೀಡಿರುವ ಕೊಡುಗೆ ಅನುಪಮವಾಗಿದೆ. ಅವರ ಸುಪುತ್ರರಾದ ಇವರು ಕೂಡ ಅದನ್ನು ಮುಂದುವರೆಸಿಕೊಂಡು ಹೋಗಿರುವುದು ಅಭಿನಂದನೀಯ. ಇಂದು ಹಿರಿಯರನ್ನು ಗೌರವಿಸುವ ಪರಂಪರೆಯು ದೂರಸರಿಯುತ್ತಿರುವ ಸಂದರ್ಭದಲ್ಲಿ ಅವರ ಸ್ನೇಹಿತರು, ಅಭಿಮಾನಿಗಳು ಜೊತೆಯಾಗಿ ಎಪ್ಪತ್ತೆöÊರ ಅಮೃತ ಮಹೋತ್ಸವವನ್ನು ಆಚರಿಸಿರುವುದು ಸಂತೋಷ ತಂದಿದೆ. ಅವರು ಶತಾಯುಷಿಗಳಾಗಲೆಂದು ಶುಭಕೋರಿದರು.
ಹಿರಿಯ ನ್ಯಾಯವಾದಿ ಎಸ್ ಎಂ ಕುಲಕರ್ಣಿ ಅವರು ಮಾತನಾಡಿ ಇದೊಂದು ಅಪರೂಪದ ಸಮಾರಂಭ ಒಂದೇ ವೇದಿಕೆಯ ಮೇಲೆ ಇಬ್ಬರು ಹಿರಿಯ ಜೀವಿಗಳನ್ನು ಅವರ ಸಾಮಾಜಿಕ ಸಾಹಿತ್ಯ ಸಾಂಸ್ಕೃತಿಕ ಸಾಧನೆಗಳನ್ನು ಅವಲೋಕಿಸಿ ಗೌರವಿಸುತ್ತಿರುವುದು ಸಮಾಜಕ್ಕೆ ದಿವ್ಯ ಸಂದೇಶ ನೀಡಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಖ್ಯಾತ ವೈದ್ಯ ಡಾ.ಎಚ್.ಬಿ.ರಾಜಶೇಖರ ಅವರು ಮಾತನಾಡಿ, ಜೀವನದ ಸಂಧ್ಯಾಕಾಲದಲ್ಲಿ ಅವರ ಸಾಧನೆಗಳನ್ನು ಅವಲೋಕಿಸಿ ಸಮಾಜ ಇಂತಹ ಅಪರೂಪದ ಸಮಾರಂಭಗಳನ್ನು ಆಯೋಜಿಸುತ್ತಿರುವುದು ಹೆಮ್ಮೆಯನ್ನುಂಟುಮಾಡಿದೆ. ಏಣಗಿ ಹಾಗೂ ಇಂಚಲರ ಕ್ಷೇತ್ರಗಳು ವಿಭಿನ್ನವಾಗಿದ್ದರೂ ಅವರು ಸಾಂಸ್ಕೃತಿಕ ವಲಯಕ್ಕೆ ನೀಡಿರುವ ಕೊಡುಗೆ ಅಸಾದೃಶ್ಯವೆನಿಸಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಎಂ.ಎಸ್.ಇಂಚಲರ ‘ಮುತ್ತಿನಗೊಂಚಲು’, ಸುಭಾಷ ಏಣಗಿಯವರ ‘ಸ್ನೇಹಭೂಷಣ’ ಅಭಿನಂದನ ಸಂಪುಟಗಳನ್ನು ಪೂಜ್ಯರು ಲೋಕಾರ್ಪಣೆ ಗೊಳಿಸಿದರು.
ಈ ಸಂದರ್ಭದಲ್ಲಿ ಕಾರಂಜಿಮಠದ ಗುರುಸಿದ್ಧೇಶ್ವರ ಮಹಾಸ್ವಾಮಿಗಳು, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಡಾ.ಸರಜೂ ಕಾಟ್ಕರ, ಡಾ.ಗುರುದೇವಿ ಹುಲೆಪ್ಪನವರಮಠ, ಡಾ.ರಾಮಕೃಷ್ಣ ಮರಾಠೆ ಅಭಿನಂದನಪರ ನುಡಿಗಳನ್ನಾಡಿದರು. ಡಾ.ಬಸವರಾಜ ಜಗಜಂಪಿ ಸ್ವಾಗತಿಸಿರು. ಪ್ರಿ.ಬಿ.ಎಸ್.ಗವಿಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ನಯನಾ ಗಿರಿಗೌಡರ ವಚನ ಪ್ರಾರ್ಥನೆ ಸಲ್ಲಿಸಿದರು. ಶಿರೀಷ ಜೋಶಿ ಹಾಗೂ ಯ.ರು.ಪಾಟೀಲ ಅಭಿನಂದನ ಪತ್ರ ವಾಚಿಸಿದರು. ಡಾ.ಪಿ.ಜಿ. ಕೆಂಪಣ್ಣನವರ ಹಾಗೂ ಬಸವರಾಜ ಗಾರ್ಗಿ ನಿರೂಪಿಸಿದರು. ಡಾ.ಮಹೇಶ ಗುರನಗೌಡರ ವಂದಿಸಿದರು. ಡಾ.ಎಫ್.ವ್ಹಿ.ಮಾನ್ವಿ, ನೀಲಗಂಗಾ ಚರಂತಿಮಠ, ಆರ್.ಬಿ.ಕಟ್ಟಿ, ಎಂ.ವ್ಹಿ.ಅಣ್ಣಿಗೇರಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

error: Content is protected !!