ಬೆಳಗಾವಿ-೨೯:ಬೆಳಗಾವಿ ಜಿಲ್ಲೆ ಉಸ್ತುವಾರಿ ಹಾಗೂ ಲೋಕೋಪಯೊಗಿ ಸಚಿವ ಸತೀಶ್ ಜಾರಕಿಹೊಳಿ ಪ್ರಾಬಲ್ಯದ ನಡುವೆ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಅವರ ನಾಯಕರ ರಾಜಕೀಯ ತಂತ್ರಗಾರಿಕೆ ಫಲ ಕೊಟ್ಟೀತೇ ಎಂಬ ಪ್ರಶ್ನೆಗಳು ಈಗ ಚಿಕ್ಕೋಡಿ ಲೋಕಸಭಾ ಅಖಾಡದಲ್ಲಿ ಮತದಾರರಿಂದ ಕೇಳಿ ಬರುತ್ತಿವೆ.
ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ 8 ಕ್ಷೇತ್ರಗಳ ಪೈಕಿ 5 ರಲ್ಲಿ ಕಾಂಗ್ರೆಸ್ ಶಾಸಕರು ಇರೋವದರಿಂದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆಯವರಿಗೆ ಈ ಬಾರಿ ಗೆಲುವು ಕಬ್ಬಿಣದ ಕಡಲೆ ಆಗಲಿದೆ ಎನ್ನುವ ಲೆಕ್ಕಾಚಾರಗಳು ಕ್ಷೇತ್ರದಲ್ಲಿ ಚರ್ಚೆ ನಡೆಯುತ್ತಿವೆ. ಅದಾಗ್ಯು ಕಾಂಗ್ರೆಸ್‌ದ್ದಷ್ಟು ಹುಮ್ಮಸ್ಸು, ಪ್ರಚಾರದ ಭರಾಟೆ ಬಿಜೆಪಿ ಪಾಳೆಯದಲ್ಲಿ ಕಾಣುತ್ತಿಲ್ಲ. ಮುಖ್ಯವಾಗಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಸೇರಿ ಜಿಲ್ಲೆಯ ನಾಯಕರು ಆಸಕ್ತಿಯಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವಂತೆ ಕಂಡಿಲ್ಲ. ಆದರೆ ಅಹಿಂದ ನಾಯಕರಾಗಿರುವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಂಕಾ ಜಾರಕಿಹೊಳಿ ಈ ಭಾರಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸಿದ್ದರಿಂದ ಈ ಭಾರಿ ಚಿಕ್ಕೋಡಿ ‘ಲೋಕ’ ಅಖಾಡದಲ್ಲಿ ‘ಕೈ’ ಗೆ ಹಾದಿ ಸುಗಮ ಎಂಬ ಪಿಸು ಮಾತುಗಳು ಕೇಳಿ ಬರುತ್ತಿವೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವಿವಿರ: ಚಿಕ್ಕೋಡಿ ಲೋಕಸಭೆ ವ್ಯಾಪ್ತಿ ಒಟ್ಟು 17,41,758 ಮತದಾರರಿದ್ದು, ಅದರಲ್ಲಿ ಪುರುಷರು 8,75,953 ಮತದಾರರು ಇದ್ದರೆ 8,65,731 ಮಹಿಳಾ ಮತದಾರರು ಹೊಂದಿದ್ದಾರೆ ಜೊತೆಗೆ 74 ಇತರ ಮತದಾರರು ಇದ್ದಾರೆ. ಜಾತಿವಾರು ಲೆಕ್ಕಾಚಾರದ ವಿವರ ನೋಡವುದಾದರೆ, ಲಿಂಗಾಯತ: 4,10,000, ಕುರುಬ: 1,70,000, ಎಸ್ ಸಿ: 1,65,000, ಎಸ್ ಟಿ : 90,000, ಮುಸ್ಲಿಂ: 1,80,000, ಜೈನ್: 1,30,000, ಮರಾಠ: 1,70,000, ಇತರ ಮತದಾರರು: 2,55,000 ಜನರಿದ್ದಾರೆ. ಇಲ್ಲಿ ಲಿಂಗಾಯಿತ ಮತದಾರರರೇ ನಿರ್ಣಾಯಕರು. ಹೆಚ್ಚು ಕಡಿಮೆ ಪುರುಷರಷ್ಟೇ ಮಹಿಳೆಯರು ಈ ಬಾರಿ ಹಕ್ಕು ಚಲಾಯಿಸಲಿದ್ದಾರೆ. ಬಿಜೆಪಿಗೂ ತಿಳಿದಿರುವಂತೆ ಕ್ಷೇತ್ರದ ಬಹುತೇಕ ಮಹಿಳೆಯರು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು. ಇದರಿಂದ ಮಹಿಳಾ ಮತಗಳು ಬಿಜೆಪಿಯಿಂದ ದೂರ ಉಳಿಯುವ ಸಾಧ್ಯತೆಯೇ ಹೆಚ್ಚಿರುವದರಿಂದ ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರ ಹಾದಿ ಸುಗಮವಾಗಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಎಲ್ಲಡೆ ಕೇಳಿ ಬರುತ್ತಿವೆ.
ಪ್ರಿಯಂಕಾಗಿದೆ ತಂದೆಯ ಸಹೋದರರ ಬಲ: ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ತನ್ನದೇ ಪ್ರಭಾವ ಹೊಂದಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಇರಲಿ ಜಾರಕಿಹೊಳಿ ಕುಟುಂಬದ ಓರ್ವ ಸದಸ್ಯ ಸಚಿವರಾಗುತ್ತಾರೆ. ಅಷ್ಟರ ಮಟ್ಟಿಗೆ ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ಹಿಡಿತ ಸಾಧಿಸಿದೆ. ಇದೀಗ ಜಾರಕಿಹೊಳಿ ಕುಟುಂಬದ ಎರಡನೇ ತಲೆಮಾರು ರಾಜಕೀಯ ಪ್ರವೇಶ ಆಗಿದ್ದು, ಸಚಿವ ಸತೀಶ ಪುತ್ರಿ ಪ್ರಿಯಂಕಾ ಜಾರಕಿಹೊಳಿಗೆ ಸಚಿವ ಸತೀಶ್ ಜಾರಕಿಹೊಳಿ ಸಹೋದರರು ಬೆನ್ನಿಗೆ ನಿಂತಿರುವುದು ದೊಡ್ಡ ಶಕ್ತಿ ಸಿಂಕತಾಗಿದೆ.
ಕ್ಷೇತ್ರದಲ್ಲಿ ಕಡಿಮೆಯಾಗದ ಜಾರಕಿಹೊಳಿ ವರ್ಚಸ್ಸು: ಚಿಕ್ಕೋಡಿ 8 ವಿಧಾನಸಭೆ ಕ್ಷೇತ್ರದಲ್ಲಿ ಓಡಾಟ ನಡೆಸಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಮಾಡುತ್ತಿರೋ ಸತೀಶ್ ಜಾರಕಿಹೊಳಿ ಅವರು ಕ್ಷೇತ್ರದ ಮತದಾರ ಆಕರ್ಷಿಸಿ ಮತ ಸೆಳೆಯುವ ಚಾಣಾಕ್ಷತನ ಸಿದ್ಧಿಸಿಕೊಂಡಿದ್ದಾರೆ. ಅಲ್ಲದೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಕೂಡಾ ಅವರ ತಂದೆ ಸತೀಶ ಜಾರಕಿಹೊಳಿ ಅವರು ಸದಾ ಜನಸ್ಪಂದನ ಗುಣವುಳ್ಳವರು. ಸರಳ, ಸಜ್ಜನ ವ್ಯಕ್ತಿತ್ವದಿಂದಲೇ ಸರ್ವ ಸಮುದಾಯಗಳನ್ನು ತನ್ನತ್ತ ಸೆಳೆಯಬಲ್ಲ ಸಾಮರ್ಥ್ಯ ಹೊಂದಿರುವುದರಿಂದ ಸಹಜವಾಗಿ ಪ್ರಿಯಂಕಾ ಬಗ್ಗೆ ಮತದಾರರಲ್ಲಿ ಸಕಾರಾತ್ಮಕ ಅಭಿಪ್ರಾಯ ಹೆಚ್ಚುತ್ತಿದೆ.
ಪುತ್ರಿಗಾಗಿ ತಂದೆ ಭರ್ಜರಿ ಕ್ಯಾಂಪೇನ್: ಸದ್ಯ ಚಿಕ್ಕೋಡಿ ಲೋಕಸಭಾ ಚುನಾವಣೆ ಪ್ರಚಾರದ ಅಖಾಡ ರಂಗೇರಿದ್ದು, ಪುತ್ರಿ ಪ್ರಿಯಂಕಾ ಜಾರಕಿಹೊಳಿ ಗೆಲ್ಲಿಸಲು ತಂದೆ ಸತೀಶ್ ಜಾರಕಿಹೊಳಿ ರಣತಂತ್ರ ಹೆಣೆದಿದ್ದಾರೆ. ಒಂದೆಡೆ ಸಿಎಂ ಪ್ರಚಾರವಾದರೆ ಮತ್ತೊಂದೆಡೆ ಸಚಿವ ಸತೀಶ್ ಜಾರಕಿಹೊಳಿ ಕೂಡ ಪುತ್ರಿ ಪ್ರಿಯಂಕಾ ಜಾರಕಿಹೊಳಿಯನ್ನು ಗೆಲ್ಲಿಸಿಕೊಂಡು ಬರಲು ಸೈಲೆಂಟ್ ಆಗಿಯೇ ರಣತಂತ್ರ ರೂಪಿಸುತ್ತಿದ್ದಾರೆ. ರಾಯಭಾಗ, ಅಥಣಿ, ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಸಭೆ ನಡೆಸಿದ್ದಾರೆ. ಇನ್ನು ಸತೀಶ್ ಜಾರಕಿಹೋಳಿ ಅವರ ಸೈಲೆಂಟ್ ರಾಜಕಾರಣ ಬಗ್ಗೆದ ಮಾಧ್ಯಮಗಳ ಪ್ರಶ್ನೆಗೆ ಸ್ವರಸ್ಯಕರ ಉತ್ತರ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಜೊಲ್ಲೆ ಹಾದಿ ದುರ್ಗಮ: ಎರಡನೇ ಬಾರಿಗೆ ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿದಿರುವ ಅಣ್ಣಾಸಾಹೇಬ್ ಜೊಲ್ಲೆ ಪರ ಬಿಜೆಪಿ ಪಾಳಯದಲ್ಲಿ ಆತ್ಮವಿಶ್ವಾಸದ ಹಾಗೂ ಎಲ್ಲರೂ ಒಂದಾಗಿ ಹೋಗುವ ಕೊರತೆ ಎದ್ದು ಕಂಡಿದ್ದರಿಂದ ಈ ಬಾರಿ ಗೆಲುವಿನ ಹಾದಿ ದುರ್ಗಮವಾಗಿರುವಂತೆ ಕಾಣುತ್ತಿದೆ. ಒಂದು ವೇಳೆ ಈ ಹಾದಿಯನ್ನು ಜೊಲ್ಲೆ ಸುಗಮವಾಗಿ ದಾಟಿ ಜಯದ ನಗೆ ಬೀರಿದರೆ ಅದೊಂದು ಪವಾಡವೇ ಸರಿ ಎಂದು ಹೇಳಲಾಗುತ್ತಿದೆ. ಆದರೆ ಮುಖ್ಯವಾಗಿ ಬಿಜೆಪಿ ಅಭ್ಯರ್ಥಿ ಆಯ್ಕೆ ಬಗ್ಗೆ ಅಸಮಾಧಾನವೋ ಏನೋ ಚಿಕ್ಕೋಡಿ ಲೋಕಸಭಾ ಚುನಾವಣೆಗೆ ಎರಡನೇ ಬಾರಿಗೆ ಸ್ಪರ್ಧಿಸಿರುವ ಜೊಲ್ಲೆಗೆ ಈ ಕ್ಷೇತ್ರ ಜಡವಾಗಿರುವ ಹಾಗೆ ಕಾಣುತ್ತಿದೆ. ಮೇಲಾಗಿ ಈ ನಡುವೆ ಜೊಲ್ಲೆ ದಂಪತಿಗೆ ದ್ವೇಷ-ಸೇಡಿನ ರಾಜಕಾರಣ ಎಸಗಿರುವ ಅಪವಾದವೂ ಮೊತ್ತಿಕೊಂಡಿದೆ. ಜೊತೆಗೆ ಶಶಿಕಲಾ ಸಚಿವರಿದ್ದ ವೇಳೆ ಮಕ್ಕಳ ಮೊಟ್ಟೆ ಮಾರಿಕೊಂಡ ಹಗರಣ ರಾಜ್ಯವ್ಯಾಪಿ ಸಾಕಷ್ಟು ಸದ್ದು ಮಾಡಿದ್ದು, ಇದು ಬಿಜೆಪಿಗೆ ಮಾರಕವಾಗಿ ಮಾರ್ಪಟ್ಟಿದೆ. ಅಲ್ಲದೇ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ, ಕುಡಿಯುವ ನೀರು ಮೊದಲಾಗಿ ಮೂಲಸೌಕರ್ಯಗಳ ಅಭಿವೃದ್ಧಿ ಆಗಿದ್ದರೂ ಮಹತ್ವದ ರೈಲ್ವೆ ಮಾರ್ಗಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು, ಕೈಗಾರಿಕೆಗಳ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿಆಗದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. ಒಟ್ಟಾರೆ ಈ ಬಾರಿ ಚಿಕ್ಕೋಡಿ ಲೋಕ ಆಖಾಡ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿಗೆ ಹಾದಿ ಸುಗಮವಾಗಿದ್ದು, ಬಿಜೆಪಿ ಅಭ್ಯರ್ಥಿ ಜೊಲ್ಲೆಗೆ ಮಾತ್ರ ಜಡವಾಗಿದೆ ಎಂಬ ಚರ್ಚೆಗಳು ಕ್ಷೇತ್ರದ ಎಲ್ಲಡೆ ಕೇಳಿ ಬರುತ್ತಿವೆ.