13/12/2025
IMG-20240428-WA0003

ಯರಗಟ್ಟಿ (ಬೆಳಗಾವಿ)-28:ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾನೇ ಸ್ಪರ್ಧಿಸಿದ್ದೇನೆ ಎಂದು ತಿಳಿದುಕೊಳ್ಳಿ. ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಿದರೆ ನನಗೆ ಮತ ಹಾಕಿದಂತೆ. ಈ ಮೂಲಕ ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

IMG 20240428 WA0002 - IMG 20240428 WA0002

ಯರಗಟ್ಟಿಯ ಬಸವೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಭಾನುವಾರ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೇ 7 ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. 2014 ರಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಲೋಕಸಭೆಗೆ ನಿಂತು ಸ್ವಲ್ಪ ಮತಗಳಿಂದ ಸೋತಿದ್ದರು. ಈ ಬಾರಿ ಅವರ ಮಗನನ್ನು ಆರಿಸಿ ಲೋಕಸಭೆಗೆ ಕಳುಹಿಸಿಕೊಡಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಕಳೆದ ಚುನಾವಣೆಯಲ್ಲಿ ಕರ್ನಾಟಕದಿಂದ 25 ಜನ ಬಿಜೆಪಿಯಿಂದ ಗೆದ್ದಿದ್ದರು. ಸುರೇಶ್ ಅಂಗಡಿ‌ ಮಂತ್ರಿ ಆಗಿದ್ರು, ಬಳಿಕ ಅವರ ಪತ್ನಿ ಕೂಡ ಗೆದ್ದಿದ್ದರು. ಬಿಜೆಪಿಯ 25 ಜನ ಎಂಪಿಗಳು ಮಾತಾಡಿಲ್ಲ. ಹೀಗಿರುವಾಗ, ಜಗದೀಶ್ ಶೆಟ್ಟರ್ ಅವರಿಗೆ ಮೋದಿ ಎದುರು ಮಾತಾಡುವ ಧೈರ್ಯ ಇದ್ಯಾ? ಮೋದಿ ಕಂಡ್ರೆ ಅವ್ರಿಗೆ ಭಯ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

* *ಬದ್ದತೆ ಇಲ್ಲದ ಶೆಟ್ಟರ್*

ಮಂಗಲಾ ಅಂಗಡಿಗೆ ಟಿಕೆಟ್ ಕೊಟ್ಟರೆ ಗೆಲ್ಲೋದಿಲ್ಲ ಅಂತ, ಈ ಬಾರಿ ಜಗದೀಶ್ ಶೆಟ್ಟರ್ ಅವರನ್ನು ಹುಬ್ಬಳ್ಳಿ ಯಿಂದ ನಿಲ್ಲಿಸಿದ್ದಾರೆ. ಜಗದೀಶ್ ಶೆಟ್ಟರ್ ಚಂಚಲ ಮನಸಿನ ವ್ಯಕ್ತಿ, ಬದ್ದತೆ ಇಲ್ಲದ ಮನುಷ್ಯ. ಕಳೆದ ಬಾರಿ ಬಿಜೆಪಿಯವರು ಟಿಕೆಟ್ ಕೊಡದ್ದಕ್ಕೆ ಕಾಂಗ್ರೆಸ್‌ಗೆ ಬಂದ್ರು, ಕಾಂಗ್ರೆಸ್ ಟಿಕೆಟ್ ಕೊಟ್ರು ಶೆಟ್ಟರ್ ಕೆಟ್ಟಾಗಿ ಸೋತರು.‌ ಇದೀಗ ಬೆಳಗಾವಿಯಲ್ಲಿ ಮಂಗಲಾ‌ ಅಂಗಡಿ ಬದಲಿಗೆ ಶೆಟ್ಟರ್ ಅವರನ್ನು ನಿಲ್ಲಿಸಲಾಗಿದೆ. ಕರ್ನಾಟಕದಲ್ಲಿ 12, ದೇಶಾದ್ಯಂತ 100 ಹಾಲಿ ಎಂಪಿಗಳಿಗೆ ಬಿಜೆಪಿ ಕೊಟ್ಟಿಲ್ಲ. ಇನ್ನು ಹುಬ್ಬಳ್ಳಿಯಲ್ಲಿ ಗೆಲ್ಲದ ಶೆಟ್ಟರ್ ಇಲ್ಲಿ ನಿಜವಾಗಿಯೂ ಗೆಲ್ತಾರಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

* *ಸುಳ್ಳೇ‌ ಬಿಜೆಪಿಯವರ ಮನೆದೇವ್ರು*

ಪ್ರಧಾನಿ ಮೋದಿ ಮಾತಾಡಿದರೆ ಹಸಿ‌ ಸುಳ್ಳು. ಶಿವಾಜಿ, ಕಿತ್ತೂರು ರಾಣಿ ಚೆನ್ನಮ್ಮ ಗೆ ಕಾಂಗ್ರೆಸ್ ಅವಮಾನಿಸಿದೆ ಎಂದು‌ ಮೋದಿ ಸುಳ್ಳು ಹೇಳಿದ್ದಾರೆ. ಈ ಮಹನೀಯರನ್ನು ಅತ್ಯಂತ ಗೌರವಯುತವಾಗಿ ಕಾಂಗ್ರೆಸ್ ನೋಡಿಕೊಂಡಿದೆ. ಭಕ್ತರ ಅನುಕೂಲಕ್ಕೆ ಯಲ್ಲಮ್ಮನ ಪ್ರಾಧಿಕಾರ ಮಾಡುತ್ತೇವೆ ಎಂದರು.

10‌ ವರ್ಷಗಳಿಂದ ಮೋದಿ ಪ್ರಧಾನಿ ಆಗಿದ್ದರೂ ಜನ ಸಾಮಾನ್ಯರಿಗೆ ಏನು ಪ್ರಯೋಜನ ಆಗಿಲ್ಲ. ಅಗತ್ಯ ಬೆಲೆ, ಇಳಿಯಲಿಲ್ಲ‌‌. ಎಲ್ಲಿ ಹೋಯಿತು ಮೋದಿ ಹೇಳಿದ ಅಚ್ಛೆ ದಿನ್.‌ 2014 ರಲ್ಲಿ ಡಿಸೇಲ್ 48, ಇವತ್ತು 95 ರೂಪಾಯಿ ಆಗಿದೆ. ಅಗತ್ಯ‌ ವಸ್ತುಗಳ ಬೆಲೆ ದುಪ್ಪಟ್ಟು ಆಗಿದೆ. ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ. ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ, ಸುಳ್ಳೇ ಅವರ ಮನೆ ದೇವರು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದರು.

ನಾವು ನುಡಿದಂತೆ ನಡೆದಿದ್ದೇವೆ. ಚುನಾವಣೆಗೂ ಮುನ್ನ ಕೊಟ್ಟ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದುವರೆಗು 200 ಕೋಟಿ‌ ಮಹಿಳೆಯರು ಫ್ರೀ ಆಗಿ ಪ್ರಯಾಣ ಮಾಡಿದ್ದಾರೆ. ಈ ಹಿಂದಿನ ನಮ್ಮ ಸರ್ಕಾರ ಅನ್ನಭಾಗ್ಯ ಕಾರ್ಯಕ್ರಮದಡಿ 7 ಕೆಜಿ ನೀಡುತ್ತಿದ್ದೇವು, ಬಿಎಸ್ ಯಡಿಯೂರಪ್ಪ 5 ಕೆಜಿಗೆ ಇಳಿಸಿದ್ರು. 2023ರಲ್ಲಿ 10ಕೆಜಿ ಅಕ್ಕಿಯನ್ನು ಫ್ರೀ ಆಗಿ ಕೊಡ್ತೀವಿ ಅಂತ ಹೇಳಿದ್ವಿ..ನಾವು ದುಡ್ ಕೊಟ್ರು ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ..ಅಕ್ಕಿ ಬದಲಿಗೆ ತಿಂಗಳಿಗೆ 170 ರೂಪಾಯಿ ಕೊಡ್ತಾ ಇದ್ದೀವಿ, ಗೃಹ ಜ್ಯೋತಿ 200 ಯುನಿಟ್ ರವರೆಗೆ ಎಲ್ಲರಿಗೂ ಫ್ರೀ, ಗೃಹಲಕ್ಷ್ಮಿ ಯೋಜನೆ ಯಡಿ 1.20 ಕೋಟಿ ಮನೆಯ ಒಡತಿಯರಿಗೆ ತಿಂಗಳಿಗೆ 2000 ರೂಪಾಯಿ ನೀಡಲಾಗುತ್ತಿದೆ. ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ 5 ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಿದ್ದೇವೆ. ಪ್ರತಿ ಕುಟುಂಬಕ್ಕೆ 5 ರಿಂದ‌ 6 ಸಾವಿರ ರೂಪಾಯಿ ಸಿಗುತ್ತಿದೆ ಎಂದರು.

ಲೋಕಸಭಾ ಚುನಾವಣಾ ನಂತರ‌ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಸಲ್ಲ. ಇದಕ್ಕಾಗಿ 50 ಸಾವಿರ ಕೋಟಿ ರೂಪಾಯಿಯನ್ನು ಬಜೆಟ್‌ನಲ್ಲಿ ಮೀಸಲು ಇಡಲಾಗಿದೆ. ನಮ್ಮ ಖಜಾನೆ ಖಾಲಿ‌ ಆಗಿಲ್ಲ, ಆಗೋದು‌ ಇಲ್ಲ‌ ಎಂದು ಹೇಳಿದರು.

ಬರ ಪರಿಹಾರ ನೀಡಲು‌ ವಿಳಂಬ ಮಾಡಿದ ಕೇಂದ್ರ ಸರ್ಕಾರ 100 ರೂಪಾಯಿ ಕೇಳಿದ್ರೆ ಕೇವಲ 19 ರೂಪಾಯಿ‌ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಭೈರತಿ ಸುರೇಶ್, ಶಾಸಕರಾದ ಅಶೋಕ್ ಪಟ್ಟಣ್, ವಿಶ್ವಾಸ್ ವೈದ್ಯ, ರಾಜು ಸೇಠ್, ಮಹಾಂತೇಶ್ ಕೌಜಲಗಿ, ಬಾಬಾ ಸಾಹೇಬ್ ಪಾಟೀಲ್, ವಿನಯ್ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ವಕ್ತಾರೆ ತೇಜಸ್ವಿನಿ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ನಾವಲಗಟ್ಟಿ ಸೇರಿದಂತೆ ‌ವಿವಿಧ ಘಟಕಗಳ, ಬ್ಲಾಕ್ ಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!