ಯರಗಟ್ಟಿ (ಬೆಳಗಾವಿ): ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಮಾಜಿಕ ನ್ಯಾಯ. ಬದ್ಧತೆಗೆ ಮತ್ತೊಂದು ಹೆಸರೇ ಕಾಂಗ್ರೆಸ್ ಪಕ್ಷ. ಮನೆ ಮಗ ಮೃಣಾಲ್ ಹೆಬ್ಬಾಳ್ಕರ್ ಬೇಕಾ, ಬೀಗರು ಬೇಕಾ? ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಯರಗಟ್ಟಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕೇಂದ್ರ ಸರ್ಕಾರದ ದ್ವಂದ್ವ ನೀತಿಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಟೀಕಿಸಿದರು.
ಕರೋನಾದಿಂದಾಗಿ ಸಂಕಷ್ಟದಲ್ಲಿದ್ದ ಜನರ ಅನುಕೂಲಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಅಧಿಕಾರಕ್ಕೆ ಬಂದ ತಕ್ಷಣ ಯೋಜನೆಗಳನ್ನು ಜಾರಿಗೆ ತಂದು ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಯೋಜನೆಗಳಿಂದ ಅನುಕೂಲ ಆಗಿದೆಯೇ ಹೊರತು,ಯಾವ ಹೆಣ್ಣು ಮಕ್ಕಳು ದಾರಿ ತಪ್ಪಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು. ,
ಬಿಜೆಪಿಯವರು ಬರಿ ಆಶ್ವಾಸನೆಗಳಲ್ಲೇ ಕಾಲ ಕಳೆಯುತ್ತಾ ಬಂದಿದೆ. ಕೇಂದ್ರ ಸರ್ಕಾರದಿಂದ ಬಡತನ ನಿರ್ಮೂಲನೆ ಆಗಲಿಲ್ಲ. ಮಹಾದಾಯಿ ಯೋಜನೆಗೆ ಪರಿಹಾರ ಸಿಗಲಿಲ್ಲ. ಯುವಕರಿಗೆ ಉದ್ಯೋಗ ಸಿಗಲಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡ ಕುಟುಂಬಗಳಿಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ನೀಡಲಾಗುವುದು ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಅವರ ಸಾಧನೆ ಏನಪ್ಪ ಅಂದ್ರೆ, ಕಾಂಗ್ರೆಸ್ ಪಕ್ಷಕ್ಕೆ ಬಂದ ತಕ್ಷಣ ಟಿಕೆಟ್ ತಗೊಂಡ್ ಸೋತು, ಮತ್ತೆ ಬಿಜೆಪಿ ಗೆ ಹೋಗಿದ್ದು. ಅವರ ಬೀಗರಾದ ಸುರೇಶ್ ಅಂಗಡಿ ಅಂತಿಮ ಸಂಸ್ಕಾರ ಮಾಡಿಸಲಿಕ್ಕೂ ಆಗದ ಶೆಟ್ಟರ್, ಇವತ್ತು ಎಂಪಿ ಆಗೋಕೆ ಬಂದಿದ್ದಾರೆ ಎಂದು ಛೇಡಿಸಿದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಸಚಿವ ಭೈರತಿ ಸುರೇಶ್, ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕರಾದ ಅಶೋಕ್ ಪಟ್ಟಣ್, ವಿಶ್ವಾಸ್ ವೈದ್ಯ, ರಾಜು ಸೇಠ್, ಮಹಾಂತೇಶ್ ಕೌಜಲಗಿ, ಬಾಬಾ ಸಾಹೇಬ್ ಪಾಟೀಲ್, ವಿನಯ್ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ವಕ್ತಾರೆ ತೇಜಸ್ವಿನಿ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ನಾವಲಗಟ್ಟಿ ಸೇರಿದಂತೆ ವಿವಿಧ ಘಟಕಗಳ, ಬ್ಲಾಕ್ ಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.