ಬೆಳಗಾವಿ-೨೭: ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಪ್ರಚಾರ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ..ಕೆ.ಶಿವಕುಮಾರ್ ಭಾನುವಾರ ಆಗಮಿಸುತ್ತಿದ್ದು, ಯರಗಟ್ಟಿಯಲ್ಲಿ ಮಧ್ಯಾಹ್ನ 2.30ಕ್ಕೆ ಅದ್ಧೂರಿ ಸಮಾವೇಶ ನಡೆಯಲಿದೆ.
ಸಮಾವೇಶ ನಡೆಯಲಿರುವ ಬಸವೇಶ್ವರ ಪ್ರೌಢ ಶಾಲಾ ಆವರಣದಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಶನಿವಾರ ಪರಿಶೀಲನೆ ನಡೆಸಿದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಬೆಳಗ್ಗೆ ಉಗಾರಖುರ್ದ್ ದಲ್ಲಿ ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಪ್ರಚಾರ ನಡೆಸಿ, ಹೆಲಿಕಾಪ್ಟರ್ ಮೂಲಕ ಯರಗಟ್ಟಿಗೆ ಆಗಮಿಸುವರು.
ಸಮಾವೇಶದಲ್ಲಿ ಲೋಕೋಪಯೋಗಿ ಸಚಿವರೂ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವಾರು ಸಚಿವರು, ಜಿಲ್ಲೆಯ ಶಾಸಕರು, ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದ್ದು, ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಮಳೆಯಾದರೂ ಯಾವುದೇ ತೊಂದರೆಯಾಗದಂತೆ ಪೆಂಡಾಲ್ ಗಳನ್ನು ಹಾಕಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸಂಪೂರ್ಣ ಕಾಂಗ್ರೆಸ್ ಪರ ವಾತಾವರಣ ನಿರ್ಮಾಣವಾಗಿದ್ದು,
ಭಾನುವಾರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಕಾರ್ಯಕರ್ತರಲ್ಲಿ ಇನ್ನಷ್ಟು
ಉತ್ಸಾಹ ತುಂಬಲಿದ್ದಾರೆ. ಸ್ಥಳೀಯ ಅಭ್ಯರ್ಥಿಯಾಗಿರುವ ಮೃಣಾಲ ಹೆಬ್ಬಾಳಕರ್ ಅವರನ್ನು ಗೆಲ್ಲಿಸಲೇ ಬೇಕೆಂದು ಕ್ಷೇತ್ರದ ಜನರು ನಿರ್ಧರಿಸಿದ್ದು, ಅತ್ಯಧಿಕ ಬಹುಮತದಿಂದ ಕಾಂಗ್ರೆಸ್ ಗೆಲ್ಲಲಿದೆ. ಭಾನುವಾರದ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದ್ದಾರೆ.