ಬೆಳಗಾವಿ-30: “ವಿಜಯ್ ದಿವಸ್ ಭಾರತಕ್ಕೆ ಅಪಾರ ಹೆಮ್ಮೆಯ ದಿನವಾಗಿದೆ. ಯುದ್ಧದ ಸಮಯದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸೈನಿಕರಿಗೆ ಹಾಗೂ ಅವರ ಕುಟುಂಬದ ತ್ಯಾಗಮಯಿ ವೀರ ನಾರಿಯರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಅದರಂತೆ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಯೋಧರ ಕುಟುಂಬವನ್ನು ಸಮಾಜದ ಪ್ರತಿಯೊಬ್ಬರೂ ಗೌರವಿಸಬೇಕು” ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಹಾಗೂ ವಿಜಯ ದಿವಸ-2023ರ ಕಾರ್ಯಕ್ರಮದಲ್ಲಿ ವೀರನಾರಿಯರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಪ್ರತಿ ವರ್ಷದಂತೆ ಡಿಸೆಂಬರ್ 7 ರಂದು
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಹಾಗೂ ಡಿಸೆಂಬರ್ 16 ರಂದು ವಿಜಯ ದಿವಸ ಎಂದು ದೇಶದ ಎಲ್ಲೆಡೆ ಹಾಗೂ ಹೊರ ದೇಶಗಳಲ್ಲಿರುವ ಭಾರತೀಯರು ಸಹ ಆಚರಿಸುತ್ತಾರೆ. ಜಿಲ್ಲೆಯಲ್ಲಿ ಈ ವರ್ಷ ಡಿಸೆಂಬರ್ 4 ರಿಂದ ಡಿ.15 ರವರೆಗೆ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆದ ಕಾರಣ ಇವತ್ತು ವಿಜಯ ದಿವಸ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
1971 ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಕುಟುಂಬದ ಸದಸ್ಯರಾದ ವೀರನಾರಿಯರಿಗೆ ಹಾಗೂ ಯುದ್ಧದಲ್ಲಿ ಗಾಯಗೊಂಡ ಮಾಜಿ ಯೋಧರಿಗೆ ಇವತ್ತಿನ ದಿನ ಸನ್ಮಾನ ಮಾಡುತ್ತಿರುವುದು ನಮ್ಮ ಸೌಭಾಗ್ಯ ಎಂದು ತಿಳಿಸಿದರು.
ಪ್ರತಿ ವರ್ಷ 1000 ರಿಂದ 1200 ಯೋಧರು ಗಡಿಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡುವುದರ ಮೂಲಕ ದೇಶದ ಭದ್ರತೆಗೆ ಸಾಕ್ಷಿಯಾಗಿದ್ದಾರೆ ಹಾಗೆ ಕುಟುಂಬದವರು ಸಹ ಈ ತ್ಯಾಗಕ್ಕೆ ಪ್ರಮುಖ ಕಾರಣರಾಗುತ್ತಾರೆ.
ಭಾರತದ ಸ್ವಾತಂತ್ರ್ಯ ಯೋಧರು ಹಾಗೂ ಸೈನಿಕರ ಕೊಡುಗೆಯಾಗಿ ನಾವು ಭಾರತದ 75ನೇ ಆಜಾದಿಕಾ ಅಮೃತ ಮಹೋತ್ಸವವನ್ನು ಆಚರಿಸಿದ್ದವೆ. ಯೋಧರು ತಮ್ಮ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ನೀಡುವುದರ ಮೂಲಕ ದೇಶ ವಾಸಿಗಳಿಗೆ ನೆಮ್ಮದಿಯ ಬದುಕು ಕಲ್ಪಿಸಿಕೊಟ್ಟಿದ್ದಾರೆ ಅವರೆಲ್ಲರನ್ನೂ ನಾವು ನಿರಂತರ ಸ್ಮರಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹೇಳಿದರು.
ವೀರ ನಾರಿಯರಿಗೆ ಸನ್ಮಾನ:
ಇದಕ್ಕೂ ಮುಂಚೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು 1971 ರಲ್ಲಿ ನಡೆದ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಕುಟುಂಬದ ಸದಸ್ಯರಾದ ವೀರ ನಾರಿಯರಿಗೆ ಹಾಗೂ ಯುದ್ಧದಲ್ಲಿ ಗಾಯಗೊಂಡ ಮಾಜಿ ಯೋಧರಿಗೆ ಸನ್ಮಾನಿಸಿ ಗೌರವಿಸಿದರು. ಅದೇ ರೀತಿಯಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ನಿಮಿತ್ಯ ಸ್ಟಿಕರ್ ಗಳನ್ನು ಬಿಡುಗಡೆ ಮಾಡಿದರು.
ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿವೃತ್ತ ಜಂಟಿ ನಿರ್ದೇಶಕಿ ಕಮಾಂಡರ್ ಇಂದುಪ್ರಭಾ. ವಿ, ಎನ್.ಸಿ.ಸಿ ಜಿಪಿ ಕಮಾಂಡರ್ ಕರ್ನಲ್ ಮೋಹನ ನಾಯಕ ಹಾಗೂ ಮಾಜಿ ಯೋಧರ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.