23/12/2024
IMG-20240423-WA0012
ಬೆಳಗಾವಿ-೨೩: ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಆಯಾ ಪಕ್ಷದ ತಾರಾಪ್ರಚಾರಕರ ಜತೆ ಪ್ರಚಾರ ಕಾರ್ಯಕ್ರಮದ ವೇದಿಕೆಯನ್ನು ಹಂಚಿಕೊಂಡರೆ ಆ ಕಾರ್ಯಕ್ರಮದ‌ ಸಂಪೂರ್ಣ ವೆಚ್ಚವನ್ನು‌ ಅಭ್ಯರ್ಥಿಗಳ ವೆಚ್ಚಕ್ಕೆ ಸೇರಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
IMG 20240423 WA0061 -
ಬೆಳಗಾವಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಹಾಯಕ ಚುನಾವಣಾಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡಬಾರದು. ಇಂತಹ ಪ್ರಕರಣಗಳು‌ ಕಂಡುಬಂದರೆ ಪ್ರಕರಣ ದಾಖಲಿಸಲಾಗುವುದು.
ಯಾವುದೇ ಶಿಕ್ಷಕಣ ಸಂಸ್ಥೆಗಳಲ್ಲಿ ಪ್ರಚಾರಕಾರ್ಯ‌ ಕೈಗೊಳ್ಳಬೇಕಾದರೆ ಮುಂಚಿತವಾಗಿ ಸಂಬಂಧಿಸಿದ ಸಂಸ್ಥೆಯಿಂದ ಅನುಮತಿ ಪಡೆದುಕೊಳ್ಳಬೇಕು ಎಂದರು.
ಚುನಾವಣಾ ಆಯೋಗದಿಂದ ನಿಯೋಜಿತಗೊಂಡಿರುವ ಸಾಮಾನ್ಯ ವೀಕ್ಷಕರು, ಪೊಲೀಸ್ ವೀಕ್ಷಕರು ಹಾಗೂ‌ ವೆಚ್ವ ವೀಕ್ಷಕರು ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ. ಆದ್ದರಿಂದ ಚುನಾವಣೆಗೆ‌ ಸಂಬಂಧಿಸಿದಂತೆ ಯಾವುದೇ ದೂರು‌ ಅಥವಾ ಲೋಪದೋಷಗಳು ಕಂಡುಬಂದರೆ ವೀಕ್ಷಕರಿಗೆ ಮಾಹಿತಿಯನ್ನು ನೀಡಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿ 95 ಲಕ್ಷ:
ವೆಚ್ಚ ನೋಡಲ್‌ ಅಧಿಕಾರಿ ಶಂಕರಾನಂದ‌ ಬನಶಂಕರಿ‌ ಅವರು, ಚುನಾವಣೆಗಾಗಿ ಅಭ್ಯರ್ಥಿಗಳು‌ ಮಾಡಬಹುದಾದ ಕಾನೂನು‌ಬದ್ಧ ಖರ್ಚು-ವೆಚ್ಚಗಳ ಕುರಿತು ಮಾಹಿತಿಯನ್ನು ನೀಡಿದರು.
ರಾಜ್ಯದಲ್ಲಿರುವ ಪ್ರತಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಯು 95 ಲಕ್ಷ ರೂಪಾಯಿ ವೆಚ್ಚ ಮಾಡಬಹುದು.
ಚುನಾವಣಾ ಪ್ರಚಾರ, ವಾಹನ‌ ಬಳಕೆ, ಜಾಹೀರಾತು ಇತ್ಯಾದಿ ಕಾನೂನು ಬದ್ಧ ವೆಚ್ಚಗಳನ್ನು ಮಾಡಬಹುದು. ಆದರೆ ಮತದಾರರಿಗೆ ಊಟೋಪಹಾರ ಅಥವಾ ಆಮಿಷಗಳನ್ನು ಒಡ್ಡುವಂತಿಲ್ಲ ಎಂದರು.
ಅಭ್ಯರ್ಥಿಗಳು ತಮ್ಮ ಜಂಟಿ‌ ಖಾತೆಯ ಮೂಲಕವೇ ಚುನಾವಣಾ ಪ್ರಚಾರದ ವೆಚ್ಚ ಮಾಡಬಹುದು. ಹತ್ತು ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಕಡ್ಡಾಯವಾಗಿ ಚೆಕ್ ಮೂಲಕವೇ ಮಾಡಬೇಕು. ಯುಪಿಐ ಮೂಲಕ ಕೂಡ ವೆಚ್ಚ ಪಾವತಿಸಬಹುದು ಎಂದು ಬನಶಂಕರಿ ತಿಳಿಸಿದರು.
ತಾರಾ ಪ್ರಚಾರಕರ ಜತೆ ಅಭ್ಯರ್ಥಿಗಳು ವೇದಿಕೆ ಹಂಚಿಕೊಂಡರೆ‌ ಅಥವಾ ತಾರಾ ಪ್ರಚಾರಕರು ಅಭ್ಯರ್ಥಿಗಳ ಹೆಸರು ಪ್ರಸ್ತಾಪಿಸಿದರೆ, ಕಾರ್ಯಕ್ರಮದ‌ ವೇದಿಕೆ ಅಥವಾ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳ ಭಾವಚಿತ್ರ ಬಳಸಿದರೆ ಸದರಿ ಪ್ರಚಾರ ಕಾರ್ಯಕ್ರಮದ ಖರ್ಚು-ವೆಚ್ಚವನ್ನು ಸಂಬಂಧಿಸಿದ ಅಭ್ಯರ್ಥಿಗಳ ಲೆಕ್ಕಕ್ಕೆ ಸೇರಿಸಲಾಗುವುದು ಎಂದು ಬನಶಂಕರಿ ವಿವರಿಸಿದರು.
ಇದೇ ಸಂದರ್ಭದಲ್ಲಿ ಮಾದರಿ ನೀತಿಸಂಹಿತೆ ಕುರಿತು ವಿವರಿಸಿದ ನೋಡಲ್ ಅಧಿಕಾರಿ ಶಿವನಗೌಡ ಪಾಟೀಲ ಅವರು, ಪ್ರಚಾರದ ಸಮಯದಲ್ಲಿ ಜಾತಿ-ಧರ್ಮ, ಸಮುದಾಯ, ಭಾಷೆಗಳ ಮಧ್ಯೆ ಸಂಘರ್ಷಕ್ಕೆ ಪ್ರಚೋದನೆ ನೀಡುವುದು ಹಾಗೂ ಮತದಾರರಿಗೆ ಹಣ ಅಥವಾ ಯಾವುದೇ ಬಗೆಯ ವಸ್ತುಗಳ ಉಡುಗೊರೆಯ ಆಮಿಷಯೊಡ್ಡುವುದು ಮಾದರಿ ನೀತಿಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದರು.
ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಂದಕ್ಕೂ ಅನುಮತಿಯ ಅಗತ್ಯವಿರುತ್ತದೆ. ಆದ್ದರಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಂಡು ಮಾಡಬೇಕಾಗಿರುತ್ತದೆ ಎಂದು ಹೇಳಿದರು.
ಸಾಮಾನ್ಯ ವೀಕ್ಷಕರಾದ ಎಂ.ಕೆ.ಅರವಿಂದ ಕುಮಾರ್, ಪೊಲೀಸ್ ವೀಕ್ಷಕರಾದ ಪವನ ಕುಮಾರ್, ವೆಚ್ಚ ವೀಕ್ಷಕರಾದ ಹರಕ್ರಿಪಾಲ್ ಖಟಾನಾ ಹಾಗೂ ನರಸಿಂಗರಾವ್ ಬಿ., ಪೊಲೀಸ್ ಆಯುಕ್ತರಾದ ಯಡಾ‌ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ‌ ರೋಹನ್ ಜಗದೀಶ್, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಶುಭಂ ಶುಕ್ಲಾ ಉಪಸ್ಥಿತರಿದ್ದರು.
ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ನೋಡಲ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
error: Content is protected !!