ಬೆಳಗಾವಿ-೨೩: ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ನಡೆದ ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಎಂಎಲ್‌ಸಿ ಚನ್ನರಾಜ ಹಟ್ಟಿಹೋಳಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ನಡೆಸಲಾಯಿತು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಹೋದರಿ ನೇಹಾ ಹತ್ಯೆ ಖಂಡನೀಯ, ವಿದ್ಯಾರ್ಥಿನಿ ನೇಹಾ ಹತ್ಯೆ ರಾಜ್ಯವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಇಂತಹ ಘಟನೆಗಳು ಮರುಕಳಿಸದಂತೆ, ಮಹಿಳೆಯರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಹೊಸ ಕಾನೂನ ಜಾರಿಗೆ ತರಬೇಕೆಂದು ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದರು.
ಈ ವೇಳೆ ಎಂಎಲ್‌ಸಿ ಚನ್ನರಾಜ ಹಟ್ಟಿಹೋಳಿ ಮಾತನಾಡಿ, ಸಹೋದರಿ ನೇಹಾ ಹತ್ಯೆಯಿಂದ ಬಹಳಷ್ಟು ನೋವಾಗಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಬೇಕಿದೆ. ಇದರಲ್ಲಿ ಯಾರೂ ರಾಜಕೀಯ ಮಾಡೋಕೆ ಬಯಸೋದಿಲ್ಲ. ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಆ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಇದು ಸರಿಯಲ್ಲ ಇಂತಹ ಸಂದರ್ಭದಲ್ಲಿ ನ್ಯಾಯ ಕೋಡಿಸುವ ಪ್ರಯತ್ನ ಆಗಬೇಕು ಹೊರತು ಆಡಳಿತ ಪಕ್ಷವೇ ಗುರಿಯಾಗಿಸಬಾರದು, ಬೇಕಿದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ ಹೊಸ ಕಾನೂನು ಜಾರಿಗೆ ತರಲಿ. ಅದಕ್ಕೆ ನಮ್ಮ ಒಮ್ಮತ ಇದೆ. ಇದನ್ನೆಲ್ಲವನ್ನೂ ರಾಜಕೀಯ ಬಾರದು ಎಂದರು.
ನೇಹಾ ಹಿರೇಮಠ ಆತ್ಮಕ್ಕೆ ಶಾಂತಿ ಸಿಗಲಿ, ಅಪರಾಧಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.ಇಂತಹ ನೀಚ ಕೃತ್ಯವನ್ನು ವಿಕೃತ ಮನುಷ್ಯನಷ್ಟೇ ಮಾಡಬಹುದು. ಕಾನೂನು ಪ್ರಕಾರ ಅಪರಾಧಿಗೆ ಕಠಿಣ ಶಿಕ್ಷೆ ಕೊಡಬೇಕು ಎಂದು ಅವರು ಆಗ್ರಹಿಸಿದರು. ಸರಕಾರ ಈಗಾಗಲೆ ಮಹಿಳೆಯರಿಗೆ ಆಗುವ ಅನ್ಯಾಯ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಲೆಂದು ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲು ನಿರ್ಧರಿಸಿದೆ.
ತನ್ಮೂಲಕ ಮಹಿಳೆಯರ ಜೊತೆಗಿದ್ದೇವೆ ಎನ್ನುವುದನ್ನು ತೋರಿಸಿದ್ದೇವೆ. ಈಗಾಗಲೆ ನೇಹಾ ತಂದೆ ನಿರಂಜನ ಹಿರೇಮಠ ಅವರು ಮನವಿ ಮಾಡಿದ್ದಾರೆ. ಎಲ್ಲ ಪಕ್ಷದವರೂ ತಮ್ಮ ಮನೆಗೆ ಬಂದು ಸಾಂತ್ವನ ಹೇಳಿದ್ದಾರೆ, ನ್ಯಾಯ ಕೊಡಿಸುವ ಭರವಸೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ. ಇಷ್ಟಾದರೂ ಬಿಜೆಪಿಯವರು ಪ್ರಕರಣವನ್ನು ರಾಜಕೀಯಕ್ಕೆ ಬಳಸುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದು ಚನ್ನರಾಜ ತಿಳಿಸಿದರು.
ಶಾಸಕ ರಾಜು ಸೇಠ ಮಾತನಾಡಿ, ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ನಡೆಯಬಾರದು ಇತ್ತು, ಆರೋಪಿ ಫಯಾಜ್ ಕಠಿಣ ಶಿಕ್ಷೆಯಾಗಲಿ. ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ ನಡೆಸಿ ಸರ್ಕಾರ ಮನವಿ ಸಲ್ಲಿಸಲಾಗಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಆ ಮೂಲಕ, ಸಂತ್ರಸ್ತ ಹಿಂದೂ ಕುಟುಂಬದ ಪರವಾಗಿ ನಾವಿದ್ದೇವೆ ಎಂದು ಸಾರ್ವಜನಿಕವಾಗಿ ಸಂದೇಶ ನೀಡಿದರು.
ಎಂಎಲ್‌ಸಿ ಚನ್ನರಾಜ ಹಟ್ಟಿಹೋಳಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ ಅಡಿಯಲ್ಲಿ ನೇಹಾ ಭಾವಚಿತ್ರ ಅಂಟಿಸಿ “ಹೆಣ್ಣು ವಿದ್ಯಾರ್ಥಿಗಳನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು” ಎಂಬ ಬರಹ ಹಾಗೂ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿದರು.
ಈ ಶಾಸಕ ಬಾಬಾಸಾಹೇಜ ಪಾಟೀಲ, ಪ್ರದೀಪ ಎಂ ಜೆ, ವಿನಯ ನಾವಲಗಟ್ಟಿ, ಪ್ರಭಾವತಿ, ಜಯಶ್ರೀ ಮಾಳಗಿ, ಆಯುಷ ಸನದಿ ಹಾಗೂ ಕಾಂಗ್ರೆಸ್ ಕಾರ್ಯಕರ್ಯರು ಉಪಸ್ಥಿತಿರಿದ್ದರು.