ಬೆಳಗಾವಿ-೧೮: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿಯವರು ಇಂದು ಚಿಕ್ಕೋಡಿಯ ಎಸಿ ಕಚೇರಿಯಲ್ಲಿ ಚುನಾವಣಾಧಿಕಾರಿಗಳಾದ ರಾಹುಲ್ ಶಿಂಧೆ ಅವರಿಗೆ ಸರಳವಾಗಿ ನಾಮಪತ್ರ ಸಲ್ಲಿಸಿದರು.
ತಂದೆ, ಸಚಿವರಾದ ಸತೀಶ್ ಜಾರಕಿಹೊಳಿಯವರ ಹಾದಿಯಲ್ಲಿ ಸಾಗುತ್ತಿರುವ ಪ್ರಿಯಂಕಾ ಜಾರಕಿಹೊಳಿ ಅವರು ಅವರು ಯಾವುದೇ ಮೆರವಣಿಗೆ , ಆಡಂಬರ ಇಲ್ಲದೇ ಸರಳವಾಗಿಯೇ ನಾಮಪತ್ರ ಸಲ್ಲಿಸುವ ಮೂಲಕ ಸರಳತೆ ಮೆರೆದರು.
ನಾಮಪತ್ರ ಸಲ್ಲಿಸುವಾಗ ಪ್ರಿಯಂಕಾಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ, ದೆಹಲಿಯ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಶಾಸಕರಾದ ಲಕ್ಷ್ಮಣ್ ಸವದಿ, ಗಣೇಶ್ ಹುಕ್ಕೇರಿ, ರಾಜು ಕಾಗೆ, ಮಹೇಂದ್ರ ತಮ್ಮಣ್ಣವರ್, ವಿಶ್ವಾಸ ವೈದ್ಯ, ಆಸೀಫ್ (ರಾಜು) ಸೇಠ್, ಮಹಾಂತೇಶ ಕೌಜಲಗಿ, ಬಾಬಾ ಸಾಹೇವ್ ಪಾಟೀಲ್ ಸಾಥ್ ನೀಡಿದರು.
ಅಲ್ಲದೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಯುವ ತನಕ ಮಾಜಿ ಸಚಿವರಾದ ವೀರಕುಮಾರ ಪಾಟೀಲ್, ಎ.ಬಿ.ಪಾಟೀಲ್, ಮಾಜಿ ಶಾಸಕರಾದ ಕಾಕಾ ಸಾಹೇಬ್ ಪಾಟೀಲ್, ಶ್ಯಾಮ್ ಘಾಟಗೆ, ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಉತ್ತಮ ಪಾಟೀಲ್, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ಉತ್ತಮ ಪಾಟೀಲ್ ಸೇರಿದಂತೆ ನೂರಾರು ಮುಖಂಡರು ಚಿಕ್ಕೋಡಿ ಎಸಿ ಕಚೇರಿ ಆವರಣದ ಹೊರಗೆ ನಿಂತಿದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಪರ ಸಮೀಕ್ಷೆಗಳು ಇವೆ. ಆದರೆ ಇಷ್ಟೇ ಅಂತರದಿಂದ ಗೆಲ್ಲುತ್ತಾರೆಂದು ಈಗಲೇ ಹೇಳಲು ಆಗುವುದಿಲ್ಲ. ಇಂದು ಪ್ರಿಯಂಕಾ ಜಾರಕಿಹೊಳಿ ಅವರು ಸಚಿವರು, ಶಾಸಕರು, ಎಂಎಲ್ ಸಿಗಳು, ಮಾಜಿ ಶಾಸಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದು, ಅವರೆಲ್ಲರಿಗೂ ಧನ್ಯವಾದ ತಿಳಿಸುತ್ತೇನೆಂದರು.
ನಾಮಪತ್ರ ಸಲ್ಲಿಸಿದ ಬಳಿಕ ಎರಡನೇ ಹಂತದ ಚುನಾವಣಾ ಪ್ರಚಾರ ಆರಂಭಿಸುತ್ತೇವೆಂದು ಮೊದಲೇ ಹೇಳಿದ್ದೆ. ಅದೇ ರೀತಿ ಇಂದಿನಿಂದಲೇ ಎರಡನೇ ಹಂತದ ಪ್ರಚಾರ ಆರಂಭಿಸುತ್ತೇವೆಂದು ಹೇಳಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮಾತನಾಡಿ, ಇಂದು ಬೆಳಗಾವಿ ಜಿಲ್ಲೆಯ ಎಲ್ಲಾ ಸಚಿವರ, ಶಾಸಕರ, ಮಾಜಿ ಶಾಸಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದು ಸಂತಸ ತಂದಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ವಾತಾವರಣ ಇದ್ದು, ಸಾರ್ವಜನಿಕರೆಲ್ಲರಿಂದ ಒಳ್ಳೆಯ ಸ್ಪಂದನೆ ದೊರೆಯುತ್ತಿದೆ ಎಂದರು