ಬೆಳಗಾವಿ-೧೮: ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಲಿದೆ. ಸೂರ್ಯ ಪೂರ್ವದಲ್ಲಿ ಹುಟ್ಟುವುದೆಷ್ಟು ಸತ್ಯವೋ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸುವುದು ಅಷ್ಟೇ ಸತ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ರಾಮದುರ್ಗ ವಿಧಾನಸಭಾ ಕ್ಷೇತ್ರದ ಮುದೇನೂರ್, ಬಟಕುರ್ಕಿ, ಸಾಲಾಪೂರ, ಉದುಪುಡಿ ಹಾಗೂ ಕುಳ್ಳೂರ್ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಮತಯಾಚಿಸಿದ ಸಚಿವರು, ಬದ್ದತೆಗೆ ಹೆಸರಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷ ಎಂದೂ ಕೊಟ್ಟ ಮಾತನ್ನು ತಪ್ಪಿಲ್ಲ. ಇದಕ್ಕೆ ಪಂಚ ಗ್ಯಾರಂಟಿ ಯೋಜನೆಗಳೆ ಸಾಕ್ಷಿ. ಸುಮಾರು 1.20 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪುತ್ತಿದ್ದು, ಬಡ ಮಹಿಳೆಯರ ಹಸಿವನ್ನು ನೀಗಿಸುತ್ತಿದೆ ಎಂದರು. ಕೇವಲ ಮತಗಳನ್ನು ಪಡೆದುಕೊಳ್ಳುವುದಷ್ಟೆ ಮುಖ್ಯ ಅಲ್ಲ. ಸದಾ ಬಡವರ ಅಭಿವೃದ್ಧಿಗೆ ಚಿಂತಿಸುವ ಪಕ್ಷ ಎಂದರೆ ಕಾಂಗ್ರೆಸ್ ಪಕ್ಷ ಎಂದು ಸಚಿವರು ಹೇಳಿದರು. ಕರೋನಾ, ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಪಂಚ ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ಸಹಾಯವಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಕಳೆದ 12 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನನ್ನ ಮಗ ಮೃಣಾಲ್ ಹೆಬ್ಬಾಳ್ಕರ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಕರೋನಾ ವೇಳೆ, ಪ್ರವಾಹದ ವೇಳೆ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದಾನೆ. ಮೃಣಾಲ್ ಗೆದ್ದು ಸಂಸತ್ ಗೆ ಹೋದರೆ ನಿಮ್ಮ ಮನೆ ಮಗನಾಗಿ ಕೆಲಸ ಮಾಡಲಿದ್ದಾನೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಆಶೀರ್ವಾದದಿಂದ ಮೃಣಾಲ್ ಸ್ಪರ್ಧೆ ಮಾಡಿದ್ದಾನೆ ಎಂದರು.
ಬಿಜೆಪಿಯ ಅಭ್ಯರ್ಥಿ ಬಗ್ಗೆ ಬಿಜೆಪಿಯಲ್ಲೇ ಅಪಸ್ವರವಿದ್ದು, ಅಲ್ಲಿ ಒಗ್ಗಟ್ಟಿನ ಕೊರತೆ ಕಾಡುತ್ತಿದೆ. ನಿಮ್ಮ ಮನೆ ಮಗ ಮೃಣಾಲ್ ಹೆಬ್ಬಾಳ್ಕರ್ ಬೆಂಬಲಿಸಿ, ಬೆಳಗಾವಿ ಅಭಿವೃದ್ಧಿಗೆ ಕೈಜೋಡಿಸಿ. ಕಾಂಗ್ರೆಸ್ ಅಭ್ಯರ್ಥಿ ಯುವಕನಾಗಿದ್ದು, ಆತನ ಶಕ್ತಿ ಮೀರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿದ್ದಾನೆ ಎಂದು ಹೇಳಿದರು. ಈ ಹಿಂದೆ ಜಿಲ್ಲೆಗೆ ಸಾಕಷ್ಟು ಅನ್ಯಾಯ ಮಾಡಿರುವ ಜಗದೀಶ್ ಶೆಟ್ಟರ್ ಅವರನ್ನು ಜನರು ತಿರಸ್ಕರಿಸಬೇಕು. ಮುಖ್ಯಮಂತ್ರಿ ಆದ ಬಳಿಕ ಕ್ಯಾಬಿನೆಟ್ ಸಚಿವರಾದ ಕರ್ನಾಟಕದ ಏಕೈಕ ಸಚಿವ ಎಂದರೆ ಅದು ಶೆಟ್ಟರ್. ಇದು ಅವರ ಅಧಿಕಾರ ದಾಹವನ್ನು ತೋರಿಸುತ್ತದೆ ಎಂದು ಸಚಿವರು ಕಿಡಿಕಾರಿದರು.
ಕಾಂಗ್ರೆಸ್ ಮುಖಂಡರಾದ ಪ್ರದೀಪ್ ಪಟ್ಟಣ್, ಕೆಪಿಸಿಸಿ ಸದಸ್ಯರಾದ ರಾಜೇಂದ್ರ ಪಾಟೀಲ್, ರಂಗನಗೌಡ, ಸುರೇಶ್ ಪತ್ತೆಪೂರ , ರಾಮಣ್ಣ ಬಿಡಕಿ, ಸಂಗಪ್ಪ ಪ್ಯಾಟಿಗೌಡರ, ಬೇನಪ್ಪ ತಿಮ್ಮಾಪೂರ, ನಿಂಗಪ್ಪ ಬಾರ್ಕೆ, ಈರಪ್ಪ ತಳವಾರ, ತುಕಾರಾಂ ದಾಸರ, ಹಾಸ್ಯ ನಟ ರಾಜು ತಾಳಿಕೋಟೆ ಸೇರಿದಂತೆ ನೂರಾರು ಜನ ಹಾಜರಿದ್ದರು.