23/12/2024
IMG-20240405-WA0000

ಬೈಲಹೊಂಗಲ-೦೫: ಚುನಾವಣೆಯ ನಂತರ ನಮ್ಮ ವಿಳಾಸವನ್ನು ಹುಡುಕಿಕೊಂಡು ಹೋಗುವಂತಹ ಪರಿಸ್ಥಿತಿ ಬರುವುದಿಲ್ಲ. ಸದಾ ಜನರೊಂದಿಗಿದ್ದು, ಜನರ ಸಮಸ್ಯೆಗಳಿಗೆ ನಿರಂತರ ಸ್ಪಂದಿಸಲಾಗುವುದು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ತಿಳಿಸಿದ್ದಾರೆ.

ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಆನಿಗೋಳ, ಕೆಂಗಾನೂರ್, ಸಂಗೊಳ್ಳಿ ಗ್ರಾಮ, ತುರಕರಶೀಗಿಹಳ್ಳಿ ಮೊದಲಾದ ಗ್ರಾಮಗಳಲ್ಲಿ ಬುಧವಾರ ಸಂಜೆ ಲೋಕಸಭೆ ಚುನಾವಣೆಯ ಪ್ರಚಾರ ಕೈಗೊಂಡು ಅವರು ಮಾತನಾಡಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿರುವ ತಾಯಿ ಲಕ್ಷ್ಮೀ ಹೆಬ್ಬಾಳಕರ್ ಅವರು ನಿರಂತರವಾಗಿ ಕ್ಷೇತ್ರದ ಜನರೊಂದಿಗಿರುತ್ತಾರೆ. ಅವರು ಕೆಲಸದ ನಿಮಿತ್ತ ಬೆಂಗಳೂರು, ಉಡುಪಿಗೆ ಹೋದಾಗ ನಾನು ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ಯಾವುದೇ ಸಂದರ್ಭದಲ್ಲಿ ಜನರಿಗೆ ನಿರಾಸೆ ಮೂಡುವಂತಹ ಪರಿಸ್ಥಿತಿ ಎದುರಾಗಲಿಲ್ಲ. ಅದೇ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ಸಹ ಕೆಲಸ ಮಾಡುತ್ತೇವೆ. ದಿನದ 24 ಗಂಟೆಯೂ ಜನರ ಮಧ್ಯೆ ಇರುತ್ತೇವೆ ಎಂದು ಅವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಮೃಣಾಲ ಹೆಬ್ಬಾಳಕರ್ ಕಳೆದ 10 ವರ್ಷದಿಂದ ನನ್ನೊಂದಿಗೇ ಕ್ಷೇತ್ರದ ಕೆಲಸ ಮಾಡುತ್ತಿದ್ದಾನೆ. ಜನರ ಜೊತೆ ನಿಕಟವಾದ ಸಂಪರ್ಕ ಹೊಂದಿದ್ದಾನೆ. ಬಡವರ ಬಗ್ಗೆ ಅಪಾರ ಕಳಕಳಿ ಹೊಂದಿದ್ದಾನೆ. ವಿದ್ಯಾವಂತನಾಗಿರುವುದರಿಂದ ಅಭಿವೃದ್ಧಿ ಯೋಜನೆಗಳ ಸ್ಪಷ್ಟ ಕಲ್ಪನೆ ಹೊಂದಿದ್ದಾನೆ. ಕ್ಷೇತ್ರದ ಶಾಸಕರಾಗಿರುವ ಮಹಾಂತೇಶ ಕೌಜಲಗಿ ಅವರ ಜೊತೆ ಸೇರಿ, ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತರಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್, ಚನ್ನರಾಜ ಹಟ್ಟಿಹೊಳಿ ಮತ್ತು ಮೃಣಾಲ ಹೆಬ್ಬಾಳಕರ್ ಅವರನ್ನು ಬಹಳ ವರ್ಷದಿಂದ ನೋಡುತ್ತಿದ್ದೇನೆ. ಅವರು ಸದಾ ಜನಪರ, ಅಭಿವೃದ್ಧಿ ಪರ ಧೋರಣೆ ಹೊಂದಿರುವವರು. ಅಂತವರನ್ನು ನಮ್ಮ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿದರೆ ಕ್ಷೇತ್ರದ ಅಭಿವೃದ್ಧಿಗೆ ವೇಗ ಸಿಗಲಿದೆ. ಹಾಗಾಗಿ ಮೇ 7ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮೃಣಾಲ ಹೆಬ್ಬಾಳಕರ್ ಅವರಿಗೆ ಮತ ನೀಡುವ ಮೂಲಕ ಹೆಚ್ಚಿನ ಅಂತರದಿಂದ ಗೆಲ್ಲಿಸೋಣ ಎಂದರು.
ಇದೇ ವೇಳೆ ಸಂಗೊಳ್ಳಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.
ಎಲ್ಲ ಗ್ರಾಮಗಳಲ್ಲೂ ಜನರು ಅಪಾರ ಪ್ರೀತಿ, ವಿಶ್ವಾಸದಿಂದ ಭಾಗವಹಿಸಿ, ಈ ಚುನಾವಣೆಯಲ್ಲಿ ಮೃಣಾಲ್ ಹೆಬ್ಬಾಳಕರ್ ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷ ಕಾರ್ತಿಕ ಪಾಟೀಲ, ಪಾರ್ವತೆವ್ವ ತಳವಾರ, ಸತ್ಯವ್ವ ಮಾದರ್, ಬೊಮ್ಮನಾಯ್ಕ ಪಾಟೀಲ, ಲಕ್ಷ್ಮಣ ಬಿಸ್ತನ್ನವರ್, ರಾಮನಗೌಡ ಪಾಟೀಲ, ಆಯಾ ಗ್ರಾಮಗಳ ಹಿರಿಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತಿರಿದ್ದರು.

error: Content is protected !!