23/12/2024
IMG-20240401-WA0036

ಬೆಳಗಾವಿ-೦೧: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಸುಭದ್ರವಾಗಿದೆ. ಕಳೆದ 10 ತಿಂಗಳಲ್ಲಿ ಜನರಿಗೆ ನೀಡಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಇನ್ನು ನಾಲ್ಕು ವರ್ಷಗಳ ಕಾಲ ಸರ್ಕಾರ ಸುಭದ್ರವಾಗಿರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಸವದತ್ತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿಂದೋಗಿ, ಬಂಡಾರಹಳ್ಳಿ, ಹಿರೂರು ಹಾಗೂ ಹಳ್ಳೂರಿನಲ್ಲಿ ಸೋಮವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸಚಿವರು, ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಬೀಳಲಿದೆ ಎಂದೆಲ್ಲಾ ಹಗಲು ಕನಸು ಕಾಣುತ್ತಿದ್ದಾರೆ. ಜನರು 135 ಶಾಸಕರನ್ನು ಆರಿಸಿ ಕಳುಹಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ ಎಂದರು.

ಉದ್ಯೋಗ ಸೃಷ್ಟಿ

ಬೆಳಗಾವಿ ಜಿಲ್ಲೆಯ ಯುವಕರಿಗೆ ಜಿಲ್ಲೆಯಲ್ಲೇ ಉದ್ಯೋಗ ಒದಗಿಸುವ ಯೋಜನೆಗಳನ್ನು ತರಲಾಗುವುದು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕೊಟ್ಟ ಮಾತಿಗೆ ಚ್ಯುತಿ ಬರದಂತೆ ಕೆಲಸ ಮಾಡಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

* *ಮೃಣಾಲ್ ಎಲ್ಲರ ಪ್ರತಿನಿಧಿಯಾಗಿ ಕೆಲಸ ಮಾಡಲಿದ್ದಾನೆ*

ಮೃಣಾಲ್ ಹೆಬ್ಬಾಳ್ಕರ್ ಯುವಕರು ಸೇರಿದಂತೆ ಎಲ್ಲರ ಪ್ರತಿನಿಧಿಯಾಗಿ ಸಂಸತ್‌ನಲ್ಲಿ ಧ್ವನಿ ಎತ್ತಲಿದ್ದಾನೆ. ಯುವಕರ ಪಾಲಿಗೆ ಗೆಳೆಯ, ಅಣ್ಣ, ತಮ್ಮ ಆಗಿ ಕೆಲಸ ಮಾಡಲಿದ್ದಾನೆ. ಕ್ಷೇತ್ರದ ಮಗನಿಗೆ ಆಶೀರ್ವಾದ ಮಾಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದರು.
ಲೋಕಸಭಾ ವ್ಯಾಪ್ತಿಯಲ್ಲಿ ಸುಮಾರು 2500 ಗ್ರಾಮಗಳಿದ್ದು, ಪ್ರತಿ ಗ್ರಾಮಕ್ಕೂ ಭೇಟಿ ಕೊಟ್ಟು ಸ್ಥಳೀಯರ ಸಮಸ್ಯೆ ಆಲಿಸಲಿದ್ದಾನೆ. ನಮ್ಮ ಕುಟುಂಬ ಸವದತ್ತಿ ಕ್ಷೇತ್ರದ ಜೊತೆ ಭಾವನಾತ್ಮಕ ನಂಟನ್ನು ಹೊಂದಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅಶೀರ್ವಾದಿಂದ ಪ್ರಿಯಾಂಕ ಜಾರಕಿಹೊಳಿ ಚಿಕ್ಕೋಡಿ, ಮೃಣಾಲ್ ಹೆಬ್ಬಾಳ್ಕರ್ ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇಬ್ಬರೂ ಯುವ ಅಭ್ಯರ್ಥಿಗಳಾಗಿರುವುದರಿಂದ ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಕೋರಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಕಳೆದ ವರ್ಷ ಶೆಟ್ಟರ್ ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡರು. ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಅವರ ಹಿರಿತನಕ್ಕೆ ಗೌರವ ನೀಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತು. ಇದೀಗ ಪುನಃ ಬಿಜೆಪಿಗೆ ಜಾರಿಕೊಂಡರು. ಇಂತವರಿಗೆ ಜನರು ಸರಿಯಾದ ಪಾಠ ಕಲಿಸಬೇಕು ಎಂದು ಸಚಿವರು ಕರೆಕೊಟ್ಟರು.

ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಮಾತನಾಡಿ, ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕೆನ್ನುವ ಕನಸು ಹೊತ್ತು ಚುನಾವಣೆಗೆ ಸ್ಪರ್ಧಿಸಿದ್ದೇನೆ. ವಿಶೇಷವಾಗಿ ಯುವಕರಿಗೆ ಜಿಲ್ಲೆಯಲ್ಲೇ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶ ಹೊಂದಿದ್ದೇನೆ. ಉದ್ಯೋಗದ ಜೊತೆಗೆ ಯುವಕರನ್ನು ಉದ್ಯಮಿಗಳನ್ನಾಗಿಸಲು ಒತ್ತು ನೀಡಲಾಗುವುದು ಎಂದರು.

ಸಚಿವರೊಂದಿಗೆ ಚುನಾವಣಾ ಪ್ರಚಾರದಲ್ಲಿ ಸವದತ್ತಿ ಶಾಸಕ ವಿಶ್ವಾಸ ವೈದ್ಯ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್, ಡಿ.ಡಿ.ಟೋಪೋಜಿ ಸೇರಿದಂತೆ ಅಪಾರ ಸಂಖ್ಯೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!