ಬೆಳಗಾವಿ-೩೧: ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಪರ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ.
ಭಾನುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಜೊತೆಯಲ್ಲಿ ದಕ್ಷಿಣ ಕ್ಷೇತ್ರದ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸಿದರು. ಕೋರೆ ಗಲ್ಲಿ, ವಡಗಾವಿ, ಮಜಗಾವಿ, ಆನಗೋಳ, ಶಹಾಪುರ, ಖಾಸಬಾಗ, ಸಂಭಾಜಿ ನಗರ, ಕಪಿಲೇಶ್ವರ ಕಾಲೋನಿ ಮೊದಲಾದ ಪ್ರದೇಶದಲ್ಲಿ ಪ್ರಚಾರ ನಡೆಸಿದರು.
ಬಿರು ಬಿಸಿಲಿನಲ್ಲೂ ಸಾರ್ವಜನಿಕರು ಹೊರಗೆ ಬಂದು ತಮ್ಮ ಬೆಂಬಲ ವ್ಯಕ್ತಪಡಿಸಿದರು. ಪಕ್ಷ ಭೇದ ಮರೆತು ಹಲವಾರು ಸ್ಥಳೀಯ ಮುಖಂಡರು ಪ್ರಚಾರದಲ್ಲಿ ಭಾಗಿಯಾದರು. ಈ ಬಾರಿ ನಾವೆಲ್ಲ ಪಕ್ಷಭೇದ ಮರೆತು ಕಾಂಗ್ರೆಸ್ ಬೆಂಬಲಿಸುತ್ತೇವೆ. ಗ್ಯಾರಂಟಿ ಯೋಜನೆಗಳಿಂದ ನಮಗೆ ಬಹಳಷ್ಟು ಲಾಭವಾಗಿದೆ. ಸ್ಥಳೀಯ ಅಭ್ಯರ್ಥಿಯಾಗಿರುವ ಮೃಣಾಲ ಹೆಬ್ಬಾಳಕರ್ ಅವರಿಗೆ ನಾವು ಬೆಂಬಲ ನೀಡುತ್ತೇವೆ ಎಂದು ಜನರು ಅಭಯ ನೀಡಿದರು.
ವಡಗಾವಿಯ ನೇಕಾರ ಸಮಾಜದ ಹಿರಿಯರಾದ ಭೀಮಶಿ ಪಾತಲಿ ಸೇರಿದಂತೆ ಅನೇಕ ಪ್ರಮುಖರ ಮನೆಗಳಿಗೆ ಸಹ ಸೌಹಾರ್ದಯುತ ಭೇಟಿ ನೀಡಿದರು. ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಸಹ ಪ್ರಚಾರದುದ್ದಕ್ಕೂ ಪಾಲ್ಗೊಂಡರು.
ಇದೇ ವೇಳೆ, ಟಿಳಕವಾಡಿಯಲ್ಲಿರುವ ಸಿಖ್ ಧರ್ಮದ ಸಧ್ ಸಂಗತ್ ಗುರುದ್ವಾರಕ್ಕೆ ಭೇಟಿ ನೀಡಿ, ಸಿಖ್ ಧರ್ಮದ ಸಂಪ್ರದಾಯದಂತೆ ನಡೆದ ಪ್ರಾರ್ಥನೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಮೃಣಾಲ ಹೆಬ್ಬಾಳಕರ್ ಭಾಗಿಯಾದರು. ಕ್ಷೇತ್ರ ವ್ಯಾಪ್ತಿಯಲ್ಲಿರುವ ಮಹಾತ್ಮರ ಪುತ್ಥಳಿಗಳಿಗೂ ಮೃಣಾಲ ಹೆಬ್ಬಾಳಕರ್ ಗೌರವಾರ್ಪಣೆ ಮಾಡಿದರು.
ಶ್ರೀಕಾಂತ ಭಜಂತ್ರಿ, ಯುವರಾಜ ಕದಂ, ಪರಶುರಾಮ ಢಗೆ, ಖುರ್ಷಿದ್ ಮುಲ್ಲಾ, ಸವಿತಾ ಮೊದಲಾದವರು ಉಪಸ್ಥಿತಿರಿದ್ದರು.