ಬೆಳಗಾವಿ-೩೦ : ನಿಮ್ಮ ಮನೆ ಮಗ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಬೆಂಬಲಿಸುವ ಮೂಲಕ ಬೆಳಗಾವಿ ಅಭಿವೃದ್ಧಿಗೆ ಕೈಜೋಡಿಸಬೇಕು. ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವ ಸಂಸದ ಆಗಲಿದ್ದಾನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಲೋಕಸಭೆಯ ಚುನಾವಣೆಯ ಅಂಗವಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೊದಗಾ ಹಾಗೂ ಹೊನ್ನಿಹಾಳ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ಕೈಗೊಂಡರು. ಮೊದಗಾ ಗ್ರಾಮದಲ್ಲಿ ಮಾತನಾಡಿದ ಅವರು, ಕೇವಲ ಒಂದೇ ವರ್ಷಕ್ಕೆ ನಿಷ್ಠೆ ಬದಲಿಸಿದ ಜಗದೀಶ್ ಶೆಟ್ಟರ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಕಳೆದ ವರ್ಷ ಶೆಟ್ಟರ್ ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡರು. ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಅವರ ಹಿರಿತನಕ್ಕೆ ಗೌರವ ನೀಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದೆ. ಇದೀಗ ಮೋದಿ ಅವರನ್ನು ಮತ್ತೆ ಪ್ರಧಾನ ಮಂತ್ರಿ ಮಾಡಬೇಕೆಂದು ಬಿಜೆಪಿಗೆ ಜಾರಿಕೊಂಡರು. ಸ್ವಂತ ಬೀಗರಿಂದ ಟಿಕೆಟ್ ಕಸಿದು ಬೆಳಗಾವಿಗೆ ವಲಸೆ ಬಂದಿದ್ದಾರೆ ಎಂದರು.
ಎಷ್ಟು ದಿನ ಅಂತ ಮೋದಿ ನೋಡಿ ಬಿಜೆಪಿಗೆ ಮತ ಹಾಕುವುದು. ಬಿಜೆಪಿಯ ಸ್ಥಳೀಯ ಅಭ್ಯರ್ಥಿಗಳು ಕೇವಲ ಮೋದಿ ಅವರನ್ನು ಅವಲಂಬಿಸಿದ್ದಾರೆ. ಮತದಾರರು ಜಾಗರೂಕತೆಯಿಂದ ಮತ ಚಲಾಯಿಸಿಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆಕೊಟ್ಟರು. ಹಿಂದೆ ಸುರೇಶ್ ಅಂಗಡಿ ಐದು ಬಾರಿ ಗೆದ್ದಿದ್ದರು. ಬಳಿಕ ಅವರ ಪತ್ನಿ ಮಂಗಳ ಅಂಗಡಿ ಕೂಡ ಉಪ ಚುನಾವಣೆಯಲ್ಲಿ ಗೆದ್ದಿದ್ದರು. ಇದೀಗ ಜಗದೀಶ್ ಶೆಟ್ಟರ್ ಬೀಗರಿಂದಲೇ ಟಿಕೆಟ್ ಕಸಿದಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಈ ಸಮಯದಲ್ಲಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್, ಗಂಗಣ್ಣ ಕಲ್ಲೂರ್, ಶಂಕರಗೌಡ ಪಾಟೀಲ, ಬಸವರಾಜ ಮ್ಯಾಗೋಟಿ, ಸ್ಥಳೀಯ ಕಾಂಗ್ರೆಸ್ ಮುಖಂಡರು, ಗ್ರಾಮದ ಯುವಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತಿರಿದ್ದರು.