ಬೆಳಗಾವಿ-೨೭: ನಗರದ ಚನ್ನಮ್ಮ ವೃತ್ತದಲ್ಲಿ ಬುಧವಾರ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಡ್ಡಾಯ ಮತದಾನ ಜಾಗೃತಿ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಾತನಾಡಿ, ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಶೇ.100 ರಷ್ಟು ಮತದಾನ ಪ್ರಮಾಣದ ಏರಿಕೆಗೆ ಸಹಕರಿಸಬೇಕು. ಈ ಜಾಥಾದ ಮೂಲಕ ಮತದಾನದ ಜಾಗೃತಿ ಆಗಬೇಕು ಎಂದರು.
ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಮಾತನಾಡಿ, ಈಗಾಗಲೇ ಜಿಲ್ಲೆಯಾದ್ಯಂತ ಸ್ವೀಪ್ ಸಮಿತಿಯ ಮೂಲಕ ಮತದಾರರಲ್ಲಿ ಮತದಾನದ ಜಾಗೃತಿ ಮಾಡಲಾಗುತ್ತಿದೆ. ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದೇ ರೀತಿ ಈ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಎಲ್ಲ ಮತದಾರರು ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಜಾಥಾ ಕಾರ್ಯಕ್ರಮವು ನಗರದ ಚನ್ನಮ್ಮ ವೃತ್ತದಲ್ಲಿ ಪ್ರಾರಂಭವಾಗಿ ಕಾಕತಿವೇಸ್ ರಸ್ತೆ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸಕರ್ ರಸ್ತೆ ಮೂಲಕ ಬೋಗಾರವೇಸ್ ವೃತ್ತದವರೆಗೆ ಜರುಗಿತು. ಬೋಗಾರವೇಸ್ ವೃತ್ತದಲ್ಲಿ ಕಡ್ಡಾಯ ಮತದಾನ ಜಾಗೃತಿ ಕುರಿತು ಪ್ರತಿಜ್ಞಾವಿಧಿ ಭೋಧಿಸಲಾಯಿತು.ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಯಕ್ಷಗಾನ ಕಲಾ ತಂಡಗಳು ಭಾಗವಹಿಸಿ, ಕಡ್ಡಾಯ ಮತದಾನ ಜಾಗೃತಿ ಕುರಿತು ನೃತ್ಯ ಹಾಗೂ ಡೋಳ್ಳು ಕುಣಿತದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸುಮಾರು 400, ಮಹಾನಗರ ಪಾಲಿಕೆಯಿಂದ 500, ಯುವಸಬಲೀಕರಣ ಮತ್ತು ಕ್ರಿಡಾ ಇಲಾಖೆಯಿಂದ 200, ಬಿಸಿಎಮ್ ಹಾಸ್ಟೆಲ್ ಇಂದ 200 ವಿದ್ಯಾರ್ಥಿಗಳು, ಜಿಲ್ಲಾ ಪಂಚಾಯತ ಮತ್ತು ತಾಲ್ಲೂಕಾ ಪಂಚಾಯತ ಅಧಿಕಾರಿ/ಸಿಬ್ಬಂದಿಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳು ದಾರಿ ಉದ್ದಕ್ಕು ಸಾರ್ವಜನಿಕರಿಗೆ ನಾಮಫಲಕ ಪ್ರದರ್ಶನ, ಕರಪತ್ರಗಳ ಹಂಚಿಕೆ ಹಾಗೂ ಆಟೋ ಪ್ರಚಾರ (ಜಿಂಗಲ್ಸ್)ಗಳ ಮೂಲಕ ಕಡ್ಡಾಯ ಮತದಾನ ಜಾಗೃತಿ ಕುರಿತು ವ್ಯಾಪಕ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಭಿಮಾಶಂಕರ ಗುಳೆದ,
ಡಿ.ಸಿ.ಪಿ ಅಪರಾದ & ಸಂಚಾರ ಪಿ.ವಿ ಸ್ನೇಹ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರು ಹಾಗು ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಡಾ: ಎಮ್ ಕೃಷ್ಣರಾಜು, ಉಪಕಾರ್ಯದರ್ಶಿ ಆಡಳಿತ ಬಸವರಾಜ್ ಅಡವಿಮಠ, ಲೆಕ್ಕಾಧಿಕಾರಿಯಾದ ಗಂಗಾ ಹಿರೇಮಠ, ಮಹಾನಗರ ಪಾಲಿಕೆ ಆಯುಕ್ತರಾದ ಲೊಕೇಶ ಪಿ.ಎನ್. ಯುವಸಬಲೀಕರಣ ಮತ್ತು ಕ್ರಿಡಾ ಇಲಾಖೆ ಉಪ ನಿರ್ದೇಶಕರಾದ ಬಿ. ಶ್ರೀನಿವಾಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮತ್ತಿತರು ಉಪಸ್ಥಿತರಿದ್ದರು.