ಬೆಳಗಾವಿ-೨೨: ಲೋಕಸಭಾ ಚುನಾವಣೆಯ ಸಂಬಂಧ ಜಿಲ್ಲೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸಲು ಹಾಗೂ ಮತದಾರರಲ್ಲಿ ನೈತಿಕ ಮತದಾನದ ಕುರಿತು ಜಾಗೃತಿ ಮೂಡಿಸುವದರ ಜೊತೆಗೆ ಸ್ವಿಪ್ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ ಶಿಂಧೆ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ವಿಡೀಯೊ ಸಂವಾದ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಸ್ವೀಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರಲ್ಲಿ ನೈಜ ಮತದಾನದ ಅರಿವು ಮತ್ತು ಮತದಾನದ ಪ್ರಮಾಣ ಹೆಚ್ಚಿಸುವಲ್ಲಿ ಸ್ವೀಪ್ ಸಮಿತಿಯಿಂದ ನಿರಂತರ ಚಟುವಟಿಕೆ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಹಾಗೂ ಪರಿಣಾಮಕಾರಿಯಾಗಿ ಆಯೋಜಿಸಬೇಕು.
ಕಳೆದ ಚುನಾವಣೆಗಳಲ್ಲಿ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಗ್ರಾಮೀಣ ಭಾಗಗಳಿಗಿಂತ ಕಡಿಮೆ ಆಗಿದ್ದು ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಸಂಬಂಧಿತ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು.
ಮತದಾನ ಜಾಗೃತಿಗಾಗಿ ಬೀದಿ ನಾಟಕ, ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವದರ ಜೊತೆಗೆ ಮನೆ ಮನೆಗೆ ಭೇಟಿ ನೀಡಿ ಮತದಾನದ ಕುರಿತು ಜಾಗೃತಿ ಮೂಡಿಸಬೇಕು.
ಕಳೆದ ಚುನಾಣೆಗಳಲ್ಲಿ ಕಡಿಮೆ ಮತದಾನವಾಗಿರುವಂತಹ ಮತಗಟ್ಟೆಗಳನ್ನು ಗುರುತಿಸಿ ಆ ಭಾಗದಲ್ಲಿ ಸೂಕ್ತ ಯೋಜನೆಗಳನ್ನು ರೂಪಿಸಿಕೊಂಡು ಸ್ವಿಪ್ ಚಟುವಟಿಕೆಗಳನ್ನು ನಡೆಸುವ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಜಿಲ್ಲೆಯಲ್ಲಿನ ವಲಸೆ ಕಾರ್ಮಿಕರನ್ನು ಗುರುತಿಸಿ ಮತದಾನ ದಿನದಂದು ಪಾಲ್ಗೊಳ್ಳಲು ಪ್ರೇರೆಪಿಸಬೇಕು. ಜೊತೆಗೆ ಜನದಟ್ಟಣೆ ಇರುವಂತಹ ಪ್ರದೇಶಗಳಲ್ಲಿ ಮತದಾನ ಮಹತ್ವದ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಕ್ರಮ ಜರುಗಿಸಬೇಕು.
ಮತದಾನದ ದಿನದಂದು ಅರ್ಹ ಮತದಾರರೆಲ್ಲರೂ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಅಲ್ಲದೇ ಮತಗಟ್ಟೆಗಳಲ್ಲಿ ಅಗತ್ಯದ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸುವದರ ಮೂಲಕ ಅರ್ಹ ಮತದಾರರೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
ಸ್ವೀಪ್ ಸಮಿತಿ ಸದಸ್ಯರು ತಮಗೆ ವಹಿಸಿದ ಕಾರ್ಯಹಂಚಿಕೆ ವ್ಯಾಪ್ತಿಯಲ್ಲಿ ನಡೆಸುವ ಸ್ವೀಪ್ ಚಟುವಟಿಕೆಗಳ ಸಂಬಂಧ ಪ್ರತಿನಿತ್ಯ ಚಟುವಟಿಕೆಗಳನ್ನು ಕೈಗೊಳ್ಳುವದರ ಮೂಲಕ ಜಿಲ್ಲೆಯ ಯಾವೊಬ್ಬ ಅರ್ಹ ಮತದಾರರು ಮತದಾನದದಿಂದ ವಂಚಿರಾಗದಂತೆ, ಸ್ವಯಂ ಪ್ರೇರಣೆಯಿಂದ ಮತದಾನದ ಹಬ್ಬದಲ್ಲಿ ಭಾಗಿವಹಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ತಿಳಿಸಿದರು.
*ಸ್ವೀಪ್ ಘೋಷವಾಕ್ಯ*
ಈ ವರ್ಷದ ಸ್ವೀಪ್ ಘೋಷವಾಕ್ಯ
‘ಚುನಾವಣಾ ಪರ್ವ ದೇಶದ ಗರ್ವ ಯಾವೊಬ್ಬ ಮತದಾರನೂ ಮತದಾನದಿಂದ ಹೊರಗುಳಿಯಬಾರದು.
‘ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಧ್ಯೇಯ ಹೊಂದಬೇಕು ಎಂಬ ಘೋಷವಾಕ್ಯದೊಂದಿಗೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಹುಲ ಶಿಂಧೆ ಹೇಳಿದರು.
ಸಭೆಯಲ್ಲಿ ಜಿಲ್ಲಾ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್. ನಾಗರಾಜ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಬ್ದುಲ್ ರಶೀದ್ ಮಿರ್ಜನ್ನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ವಿಕಲಚೇತನರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.