ಬೆಳಗಾವಿ-೧೫: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಆಮಿಷುಗಳಿಗೆ ಒಳಗಾಗಿ ಗ್ರಾಹಕರು ಮೋಸಹೊಗುತ್ತಿದ್ದಾರೆ. ಗ್ರಾಹಕರ ಕಾನೂನಿನ ಕುರಿತು ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸಿಗ್ರಾಹಕರನ್ನು ಸಬಲೀಕರಣಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ಆಯೋಗ, ಕಾನೂನು ಮಾಪನ ಶಾಸ್ತ್ರ. ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ (ಡಿ.ಸಿ.ಐ.ಸಿ) ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಹಾಗೂ ಇತರೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಹಕರು ತಮ್ಮ ಹಕ್ಕುಗಳ ಮತ್ತು ಜವಾಬ್ದಾರಿಯ ಬಗ್ಗೆ ತಿಳಿದುಕೊಂಡು ಎಚ್ಚೆತ್ತುಕೊಳ್ಳಬೇಕು. ಮೋಸ ಹೋಗುವರು ಇರುವತನಕ ಮೋಸ ಮಾಡುವವರು ಇರುತ್ತಾರೆ. ಗ್ರಾಹಕರನ್ನು ವಂಚನೆ ಮಾಡುವ ಮನೋಭಾವ ಬಿಟ್ಟು ಉತ್ತಮ ಮತ್ತು ಯೋಗ್ಯವಾದ ಸೇವೆಯನ್ನು ನೀಡುವ ಕಾರ್ಯ ಮಾಡಬೇಕಾಗಿದೆ. ಅಲ್ಲದೇ ಗ್ರಾಹಕರ ಹಕ್ಕುಗಳ ಕುರಿತು ವ್ಯಾಪಕ ಪ್ರಚಾರ ಕೈಗೊಂಡು ಗ್ರಾಹಕರ ಹಕ್ಕುಗಳ ಸಂರಕ್ಷಣೆಗೆ ಮುಂದಾಗುವ ಕಾರ್ಯವಾಗಬೇಕಾಗಿದೆ ಎಂದರು. ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳಾದ ಪಿ. ಮುರಳಿಮೋಹನ ರೆಡ್ಡಿ ಅವರು ಮಾತನಾಡಿ, ಕೃತಕ ಬುದ್ಧಿಮತ್ತೆಯ ಅನೇಕ ಜಾಹೀರಾತುಗಳು ಗ್ರಾಹಕರನ್ನು ಬಹುಬೇಗ ತನ್ನತ್ತ ಸೆಳೆದುಕೊಳ್ಳುತ್ತವೆ.ಜಾಹೀರಾತುಗಳ ರೂಪ ವಿನ್ಯಾಸ ನೋಡಿ ಗ್ರಾಹಕರ ಸೆಳೆದು ಮೋಸದ ಜಾಲದಲ್ಲಿ ಸಿಲುಕಿಸುವ ಜಾಲಗಳಿದ್ದು ಗ್ರಾಹಕರು ಈ ಕುರಿತು ಜಾಗೃತಿರಾಗಿರಬೇಕು.ಗ್ರಾಹಕರು ಖರೀದಿ ಮಾಡುವ ಮೊದಲು ಹೆಚ್ಚು ಜಾಗೃತರಾಗಿರಬೇಕು. ಅದರಲ್ಲೂ ಆನ್ಲೈನ್ ಮೂಲಕ ವ್ಯವಹರಿಸುವಾಗ ಹೆಚ್ಚಿನ ಜಾಗೃತೆಯಿಂದ ವ್ಯವಹರಿಸಬೇಕಾಗಿದೆ. ಗ್ರಾಹಕರಿಗಾಗಿ ಗ್ರಾಹಕರಿಗೋಸ್ಕರ ಸಾಕಷ್ಟು ಕಾನೂನುಗಳಿದ್ದು ಇವುಗಳ ಅರಿವು ಹೊಂದುವದರ ಮೂಲಕ ಮೋಸ ಹೋಗುವದನ್ನು ತಡೆಗಟ್ಟಬಹುದಾಗಿದೆಎಂದರು. ಜಿಲ್ಲಾ ಗ್ರಾಹಕರ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿಗಳಾದ ಎನ್ ಆರ್ ಲಾತೂರ್ ಅವರು ಮಾತನಾಡಿ, ಇಂದು ನಾವು ಆಧುನಿಕ ಯುಗದಲ್ಲಿ ಇದ್ದೇವೆ. ಪ್ರತಿಯೊಂದು ಕಾರ್ಯವು ಮೊಬೈಲ್ ನಿಂದಲೇ ಆಗುತ್ತಿದೆ. ಅದ್ರಲ್ಲೂ ಸಾಕಷ್ಟು ವ್ಯವಹಾರಗಳು ಮೊಬೈಲ್ ಮೂಲಕ ನಡೆಯುತ್ತಿವೆ. ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಆನ್ಲೈನ್ ಮೂಲಕ ಖರೀದಿ ಮಾಡುವುದರಿಂದ ಹೆಚ್ಚು ಮೋಸ ಹೋಗುತ್ತಿದ್ದು, ಸಾರ್ವಜನಿಕರಲ್ಲಿ ಗ್ರಾಹಕರ ಹಕ್ಕು ಹಾಗೂ ಕಾನೂನಿನ ಅರಿವು ಮೂಡಿಸಬೇಕು ಎಂದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಅಣ್ಣಾಸಾಹೇಬ ಸದಲಗೆ ಅವರು ಮಾತನಾಡಿ, ಗ್ರಾಹಕರ ಹಕ್ಕುಗಳ ಮಹತ್ವವನ್ನು ಸಾರುವ ನಿಟ್ಟಿನಲ್ಲಿ, ಪ್ರತಿ ವರ್ಷವೂ ಮಾರ್ಚ್ ೧೫ ರಂದು ವಿಶ್ವ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಕೇವಲ ಗ್ರಾಹಕರ ದಿನಕ್ಕೆ ಮಾತ್ರ ಸೀಮಿತವಾಗಬಾರದು. ಗ್ರಾಹಕ ಸಂರಕ್ಷಣಾ ಕಾಯಿದೆ ೨೦೧೯ ಗ್ರಾಹಕರ ದೂರುಗಳ ಪರಿಹಾರಕ್ಕಾಗಿ ಕಾರ್ಯ ನಿರ್ವಹಿಸುತ್ತದೆ. ನೊಂದವರು ದೂರು ನೀಡಿ ಪರಿಹಾರಕೊಂಡುಕೊಳ್ಳಬಹುದಾಗಿದೆ ಎಂದರು.ಯಾವುದೇ ವಸ್ತು ಖರೀದಿಸುವಾಗ ವಸ್ತುವಿನ ಗುಣಮಟ್ಟ, ಸುರಕ್ಷತೆ, ವಸ್ತುವಿನ ಉತ್ಪಾದನೆ ಮತ್ತು ಅದರ ಕೊನೆಯ ಅವಧಿಯನ್ನು ಪರಿಶೀಲಿಸಬೇಕು. ವಸ್ತುವು ಯಾವುದೇ ರೀತಿಯಲ್ಲಿ ದೋಷ ಪೂರಿತವಾಗಿದೆ ಎಂದು ಕಂಡು ಬಂದರೆ ಗ್ರಾಹಕರು ದೂರು ಸಲ್ಲಿಸಬಹುದು. ಆದರೆ ಎಷ್ಟೊ ಗ್ರಾಹಕರಿಗೆ ಇದರ ಬಗ್ಗೆ ಅರಿವು ಇರುವುದಿಲ್ಲ. ಗ್ರಾಹಕರು ಮೋಸ ಹೋಗುವುದನ್ನು ತಡೆಗಟ್ಟುವುದಕ್ಕೆ ಕಾನೂನಿನ ಅರಿವು ಮೂಡಿಸುವ ಕಾರ್ಯವೇ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಸಿಪಿಓ ದಿವಿಟರ, ಬೆಳಗಾವಿ ಹಾಗೂ ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ. ಹೆಚ್ಚುವರಿ ಜಿಲ್ಲಾಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಸಂಜೀವ ಕುಲಕರ್ಣಿ, ಆಹಾರ ರುನಕ್ಷತೆ ಹಾಗೂ ಗುಣ್ಣಮಟ್ಟ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ. ಜಗದೀಶ್ ಜಿಂಗಳೆ, ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್ ಸದಸ್ಯರಾದ ಡಾ. ಪೂರ್ಣಿಮಾ ಪಟ್ಟಣಶೆಟ್ಟಿ ಸೇರಿದಂತೆ ಸಾರ್ವಜನಿಕರು, ವಿಧ್ಯಾರ್ಥಿಗಳು ಹಾಜರಿದ್ದರು.