ಬೆಳಗಾವಿ-೧೩:ಇಲಾಖೆ ಸರ್ಕಾರಿ ಅಧಿಕಾರಿಗಳನ್ನು ಶಾಸಕರು, ಸಚಿವರು ಹಾಗೂ ಬೇರೆ ಯಾರೇ ಪ್ರಭಾವಿ ವ್ಯಕ್ತಿಗಳ ಶಿಫಾರಸ್ಸುಗಳನ್ನು ಆಧರಿಸಿ ವರ್ಗಾವಣೆಗೊಳಿಸಬಾರದು. ಶಿಕ್ಷಣ ಇಲಾಖೆ ಮಾದರಿಯ ಕೌನ್ಸ್‌ಲಿಂಗ್ ಮೂಲಕ ವರ್ಗಾವಣೆಗೊಳಿಸುವ ನಿಯಮ ಜಾರಿಗೆ ತನ್ನಿರಿ ಎಂದು ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಭೀಮಪ್ಪ ಗಡಾದ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಭೀಮಪ್ಪ ಗಡಾದ ಪ್ರತಿಯೊಬ್ಬ ಸರ್ಕಾರಿ ನೌಕರನ ವರ್ಗಾವಣೆಯಲ್ಲಿ ಶಾಸಕರು, ಸಚಿವರು, ಇಲಾಖಾ ಮುಖ್ಯಸ್ಥರು ರಾಜಕೀಯ ಮಾಡುತ್ತಿದ್ದಾರೆ. ಅಲ್ಲದೇ ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.ಇತ್ತೀಚೆಗೆ ಆಡಳಿತ ವ್ಯವಸ್ಥೆಯಲ್ಲಿ ವಿಪರೀತ ಭ್ರಷ್ಟಾಚಾರ ತಲೆದೋರಿದೆ. ಹೀಗಾಗಿ ಪಾರದರ್ಶಕ ಸೇವೆಗಾಗಿ ಅಧಿಕಾರಿಗಳ ವರ್ಗಾವಣೆಯನ್ನು ಕಾನೂನಾತ್ಮಕ ಕೌನ್ಸ್‌ಲಿಂಗ್ ಪದ್ಧತಿಯಲ್ಲೇ ಕೈಗೊಳ್ಳಬೇಕು. ಒಂದುವೇಳೆ ಮನಸೋ ಇಚ್ಛೆ ಶಿಫಾರಸ್ಸು ಪತ್ರಗಳು, ವರ್ಗಾವಣೆ ಆದೇಶಗಳನ್ನು ನೀಡುವ ಇಲಾಖಾ ಮುಖ್ಯಸ್ಥರು, ಶಾಸಕರು, ಸಚಿವರ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇವೆ ಎಂದು ಗಡಾದ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.