ಬೆಳಗಾವಿ-೧೦:ಕುಂದಾನಗರಿ ಬೆಳಗಾವಿಯಲ್ಲಿ ಕೃಷಿ ಉತ್ಸವದಲ್ಲಿ ಆಯೋಜಿಸಲಾದ ನಗೆ ಹಬ್ಬ ಕಾರ್ಯಕ್ರಮ ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ಪ್ರಾಣೇಶ್ ಅವರ ಜೋಕುಗಳಿಗೆ ಕೃಷಿ ಉತ್ಸವಕ್ಕೆ ಆಗಮಿಸಿದ್ದ ಜನಸ್ತೋಮ ನಗೆಗಡಲಲ್ಲಿ ತೇಲಾಡಿತು. ಪ್ರಾಣೇಶ್ ಅವರ ಅನೇಕ ಹಾಸ್ಯಕ್ಕೆ ಬೆಳಗಾವಿ ಜನರು ಬಿದ್ದು ಬಿದ್ದು ನಕ್ಕರು.
ಭಾನುವಾರ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ ಹಾಗೂ ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಸಹಯೋಗದಲ್ಲಿ ಆಯೋಜಿಸಲಾದ ಕೃಷಿ ಉತ್ಸವದ ನಾಲ್ಕನೇ ದಿನದ ನಗೆ ಹಬ್ಬದ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಹಾಸ್ಯ ಚಟಾಕಿ ಆರಂಭಿಸಿದ ಪ್ರಾಣೇಶ ಅವರ ಮಾತಿಗೆ ನೆರದ ಜನರು ನಗೆಗಡಲಲ್ಲಿ ತೇಲಾಡಿದರು. ಹಾಸ್ಯ ಕಲಾಕಾರರಾದ ನರಸಿಂಹ ಜೋಶಿ, ಬಸವರಾಜ ಮಾಮನಿ ತಮ್ಮ ಹಾಸ್ಯದ ಮೂಲಕ ಕೃಷಿ ಉತ್ಸವದಲ್ಲಿ ನೆರೆದ ಜನರನ್ನು ನಕ್ಕು ನಗಿಸಿದರು.
ಇದಕ್ಕೂ ಮುನ್ನ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದೀಲಿಪ ಕುರಂದವಾಡೆ ವ್ಯಕ್ತಿತ್ವ ವಿಕಸನದ ವಿಷಯದ ಕುರಿತು ಮಾತನಾಡಿ, ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ನ ಅಧ್ಯಕ್ಷ ಮಂಜುನಾಥ ಅಳವಣಿ ಹಾಗೂ ಅವರ ತಂಡದವರು ಕೃಷಿ ಉತ್ಸವ ಆಯೋಜಿಸಲು ಸಾಕಷ್ಟು ಶ್ರಮ ವಹಿಸಿದ್ದಾರೆ. ಬೆಳಗಾವಿ ರೈತರಿಗಾಗಿ ಈ ಉತ್ಸವದಲ್ಲಿ ಸಾಕಷ್ಟು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
ದೇಶ ರೈತರ ಬಗ್ಗೆ ಎಲ್ಲರೂ ಗೌರವ ಕೊಡಬೇಕು. ನಮಗೆ ಅರಿವು ಎನ್ನುವುದು ಬಹಳ ಮುಖ್ಯವಾಗಿದೆ. ಅದನ್ನು ಅರಿತು ಕೃಷಿಯಲ್ಲಿ ತೋಡಗುವ ರೈತರ ಬಗ್ಗೆ ಕಾಳಜಿ, ಗೌರವ ಕೊಡುವುದು ಎಲ್ಲರ ಕರ್ತವ್ಯ ಎಂದರು.
ರೋಟರಿ ಕ್ಲಬ್ ಆಫ್ ಬೆಳಗಾಮ್ ಅಧ್ಯಕ್ಷ ಮಂಜುನಾಥ ಅಳವಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಳಗಾವಿ ಜಿಲ್ಲೆ ಕೃಷಿ ಕ್ಷೇತ್ರದಲ್ಲಿಯೂ ಹೆಸರು ವಾಸಿಯಾಗಿದೆ. ರೈತರಿಗಾಗಿ ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಐದು ದಿನಗಳ ಕಾಲ ಕೃಷಿ ಉತ್ಸವವನ್ನು ಆಯೋಜಿಸಿ ರೈತರ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಇಂದಿನ ದಿನಮಾನಗಳಲ್ಲಿ ಕೃಷಿ ಇದ್ದರೆ ಮಾತ್ರ ಸುಖವಾದ ಜೀವನ ನಡೆಸಲು ಸಾಧ್ಯವಾಗುತ್ತದೆ. ಎಲ್ಲ ಯುವಕರೂ ಸಹ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಸದೃಢ ಭಾರತ ನಿರ್ಮಾಣ ಕೃಷಿಯಿಂದ ಮಾತ್ರ ಸಾಧ್ಯ ಎಂದರು.
ಸರ್ವೋತ್ತಮ ಜಾರಕಿಹೊಳಿ, ಅಭಯ ಜೋಶಿ, ಅಜಯ ಹೆಡಾ, ತವನಪ್ಪಾ ಪಾಲ್ಕರ್, ಶರತ್ ಪೈ, ಶಕೀಲ್ ಶೇಖ ಅಲಿ ಸೇರಿದಂತೆ ಹಲವಾರು ಹಾಜರಿದ್ದರು.