ಬೆಳಗಾವಿ-೦೮: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ನೀಡುವ ‘ಗಡಿನಾಡ ಚೇತನ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ
ಬೆಳಗಾವಿಯ ಹಿರಿಯ ಸಾಹಿತಿ, ರಂಗಕರ್ಮಿ, ಶಿಕ್ಷಣ ತಜ್ಞ, ಕೆಎಲ್‌ಇ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕರಾದ ಪ್ರೊ.ಬಿ.ಎಸ್.ಗವಿಮಠ ಅವರನ್ನು ಸ್ವಗೃಹದಲ್ಲಿ ಬೆಳಗಾವಿಯ ಹಿರಿಯ ಸಾಹಿತಿಗಳಾದ ಡಾ.ಬಸವರಾಜ ಜಗಜಂಪಿ, ಪ್ರೊ.ಎಂ.ಎಸ್.ಇಂಚಲ, ಡಾ.ಎಫ್.ವ್ಹಿ.ಮಾನ್ವಿ, ಏಣಗಿ ಸುಭಾಷ, ಬಸವರಾಜ ಗಾರ್ಗಿ, ಡಾ.ಮಹೇಶ ಗುರನಗೌಡರ ಅವರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಬಿ.ಎಸ್.ಗವಿಮಠ ಅನಿರೀಕ್ಷಿತವಾಗಿ ಲಭಿಸಿದ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ನನ್ನ ಸುಮಾರು ೫೫ ವರ್ಷಗಳ ಕನ್ನಡ ಸೇವೆಯನ್ನು ಮೆಲುಕು ಹಾಕುವಂತೆ ಮಾಡಿದೆ ಎಂದರು. ೫೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಗಡಿಸೇವೆ ಮಾಡಲು ಕನ್ನಡಾಂಬೆಯು ಪ್ರೇರಣೆ ನೀಡಿದಳು. ಈ ಪ್ರಶಸ್ತಿ ಮನಸ್ಸಿಗೆ ಸಂತಸ ತಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.