ಬೆಳಗಾವಿ-05:ಬೆಳಗಾವಿ ನಗರದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ವಾಣಿಜ್ಯ ಹಾಗೂ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.50 ರಿಂದ 60 ರಷ್ಟು ಕನ್ನಡ ಭಾಷೆಗೆ ಆಧ್ಯತೆ ನೀಡಬೇಕು ಎಂದು ಸರ್ಕಾರದ ಆದೇಶದ ಗಡುವು ಮುಗಿದರೂ ಇಲ್ಲಿಯವರೆಗೂ ಕನ್ನಡ ನಾಮಫಲಕ ಅಳವಡಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಕರವೇ ಕಾರ್ಯಕರ್ತರು ಜಾಗೃತಿ ಜಾಥಾ ನಡೆಸಿದರು.
ಇದಕ್ಕೂ ಮುನ್ನ ಕರವೇ ಕಾರ್ಯಕರ್ತರು ಕೆಪಿಟಿಸಿಎಲ್ ರಸ್ತೆ ಮಾರ್ಗವಾಗಿ ಕೊಲ್ಲಾಪುರ ವೃತ್ತ, ಅಂಬೇಡ್ಕರ್ ರಸ್ತೆ ಮೂಲಕ ಚನ್ನಮ್ಮ ವೃತ್ತದವರೆಗೆ ಜಾಗೃತಿ ರ್ಯಾಲಿ ಮಾಡಿ, ರಾಜ್ಯ ಸರಕಾರ ಕಡ್ಡಾಯವಾಗಿ ಅಂಗಡಿ ಮುಂಗಟ್ಟುಗಳ ನಾಮಫಲಕ ಶೇ.60 ರಷ್ಟು ಕಡ್ಡಾಯದ ಗಡುವು ಮುಗಿದೆ. ಆದರೂ ನಗರದಲ್ಲಿ ಅನ್ಯ ಭಾಷೆಯ ನಾಮಫಲಕಗಳು ರಾರಾಜಿಸುತ್ತಿವೆ. ಸ್ವಯಂ ಪ್ರೇರಿತವಾಗಿ ಕನ್ನಡ ನಾಮಫಲಕಗಳನ್ನು ಅಂಗಡಿಕಾರರು ಅಳವಡಿಸದಿದ್ದರೆ ಕರವೇ ಕಾರ್ಯಕರ್ತರು ಆ ನಾಮಫಲಗಳನ್ನು ತೆರವುಗೊಳಿಸಲಾಗುವುದು ಎಂದು ಎಚ್ವರಿಕೆ ನೀಡಿದರು.
ಸರಕಾರ ಜಾರಿಗೆ ತಂದಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕದ ಪ್ರಕಾರ ಎಲ್ಲ ಅಂಗಡಿ ಮುಂಗಟ್ಟುಗಳ ಮೇಲೂ ಕನ್ನಡದ ನಾಮಫಲಕವೇ ಶೇ.50 ರಿಂದ 60ರಷ್ಟು ಭಾಗ ಇರಬೇಕು. ಕನ್ನಡವೇ ಮೊದಲ ಸ್ಥಾನದಲ್ಲಿರಬೇಕು. ಜಾಹೀರಾತು ಫಲಕಗಳು ಕೂಡ ಕನ್ನಡದಲ್ಲಿರಬೇಕು. ಇದನ್ನು ಎಲ್ಲ ಉದ್ಯಮಿಗಳು, ವ್ಯಾಪಾರಸ್ಥರು ಪಾಲಿಸುವುದು ಕಡ್ಡಾಯವಾಗಿದೆ. ಈ ನೆಲದ ಕಾಯ್ದೆ ಕಾನೂನು ಪಾಲಿಸದವರು ಕರ್ನಾಟಕದಲ್ಲಿ ಇರಲು ಯೋಗ್ಯರಲ್ಲ. ಕಾನೂನು ಪಾಲಿಸುವ ಮನಸು ಇಲ್ಲದಿದ್ದರೆ ತಮ್ಮ ತಮ್ಮ ರಾಜ್ಯಗಳಿಗೆ ಹೋಗಿ ಎಂದು ಆಗ್ರಹಿಸಿದರು.
ಚನ್ನಮ್ಮ ವೃತ್ತದಲ್ಲಿ ಅಳವಡಿಸಲಾದ ಅನ್ಯ ಭಾಷೆಯ ಬ್ಯಾನರ್ ತೆರವು ಮಾಡಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ,ನಂತರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಸುರೇಶ ಗವನ್ನವರ, ರಮೇಶ ಯರಗಣ್ಣವರ,ಮಹಾದೇವ ತಳವಾರ, ಗಣೇಶ ರೋಕಡೆ ಸೇರಿದಂತೆ ಹಲವಾರು ಕಾರ್ಯಕರ್ತರು ಹಾಜರಿದ್ದರು.