23/12/2024
FB_IMG_1709142006603

IMG 20240221 WA0004 3 -

ಬೆಳಗಾವಿ-28: ಭಾರತ ದೇಶ ರೋಚಕ ಇತಿಹಾಸವುಳ್ಳ ದೇಶವಾಗಿದೆ. ಈ ದೇಶವನ್ನು ವೀರಾಧಿವೀರರು ಆಳಿರುವುದು ಒಂದು ಕಥೆಯಾದರೆ ಅವರನ್ನೂ ಮೀರಿಸುವಂತೆ ವೀರವನಿತೆಯರು ಆಳಿದ್ದು ಇನ್ನೊಂದು ಸಾಹಸ ಕಥೆ. ಅಂಥವರಲ್ಲಿ ವೀರ ರಾಣಿ ಬೆಳವಡಿ ಮಲ್ಲಮ್ಮ ಮೊದಲಿಗರಾಗಿ ನಿಲ್ಲುತ್ತಾರೆ. ಮಲ್ಲಮ್ಮನ ಸಾಹಸ, ದಿಟ್ಟತನದ ಇತಿಹಾಸವನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರು ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬೈಲಹೊಂಗಲ ತಾಲೂಕಿನ ಬೆಳವಡಿ
ಯಲ್ಲಿ ಬುಧವಾರ ನಡೆದ ವೀರ ರಾಣಿ ಬೆಳವಡಿ ಮಲ್ಲಮ್ಮನ ಉತ್ಸವ -2024ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಂದಿನ ಕಾಲದಲ್ಲಿ 2 ಸಾವಿರ ಮಹಿಳಾ ಸೈನ್ಯ ಕಟ್ಟಿದ
ವೀರರಾಣಿ ಬೆಳವಡಿ ಮಲ್ಲಮ್ಮ ಶಿವಾಜಿ ಮಹಾರಾಜರ ಮರಾಠ ಸೈನ್ಯದ ವಿರುದ್ಧ ಹೋರಾಡಿ ಜಯ ಸಾಧಿಸುವ ಮೂಲಕ ದೇಶದಲ್ಲೇ ಮೊದಲ ಮಹಿಳಾ ಸೈನ್ಯ ಕಟ್ಟಿದ ವೀರವನಿತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.

ಬೈಲಹೊಂಗಲ ನಾಡು ಹೋರಾಟಗಾರ ನಾಡು, ದೇಶದ ಸ್ವಾತಂತ್ರ್ಯಕ್ಕೆ ಅನೇಕ ಹೋರಾಟಗಾರರ ತ್ಯಾಗ ಬಲಿದಾನದಿಂದ ನಾವೆಲ್ಲರೂ ಇಂದು ನೆಮ್ಮದಿಯಿಂದ ಇದ್ದೇವೆ. ಇವತ್ತಿನ ಯುವ ಪೀಳಿಗೆಗೆ ಇತಿಹಾಸವನ್ನ ತಿಳಿಸುವ ಉದ್ದೇಶದಿಂದ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ.

ವೀರರಾಣಿ ಬೆಳವಡಿ ಮಲ್ಲಮ್ಮನ ಪ್ರಶಸ್ತಿ ಪುಸ್ಕೃತರಾದ ಮಹಿಳೆಯರಿಗೆ ಪ್ರತಿ ವರ್ಷ ಜಿಲ್ಲಾಡಳಿತದಿಂದ 25 ಸಾವಿರ ನೀಡಲಾಗುವದು ಎಂದು ಶಾಸಕ ಮಹಾಂತೇಶ ಕೌಜಲಗಿ ಅವರು ತಿಳಿಸಿದರು.

ಇದಕ್ಕೂ ಮುಂಚೆ ಮಾತನಾಡಿದ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಶಾಸಕ ಮಹಾಂತೇಶ ಕೌಜಲಗಿ ಅವರ ಶ್ರಮದಿಂದ ಬೆಳವಡಿ ಮಲ್ಲಮ್ಮನ ಉತ್ಸವಕ್ಕೆ ಹೆಚ್ಚು ಅನುದಾನ ದೊರೆತಿದೆ. ಅವರು ಸರ್ಕಾರದಿಂದ 1 ಕೋಟಿ ಅನುದಾನ ತರುವ ಮೂಲಕ ಕಾರ್ಯಕ್ರಮದ ಮೌಲ್ಯ ಹೆಚ್ಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ನಾಡಿನ ಕೀರ್ತಿ ಹೆಚ್ಚಿಸಿದ ವೀರರಾಣಿ ಬೆಳವಡಿ ಮಲ್ಲಮ್ಮನ ಕೊಡುಗೆ ಅಪಾರ. ನಾಡಿನ ಇತಿಹಾಸವನ್ನ ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಸರ್ಕಾರ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು.
ರಾಣಿ ಚನ್ನಮ್ಮ ಕಾಲಘಟ್ಟಕ್ಕಿಂತ ಸುಮಾರು ನೂರು ನಲವತ್ತು ವರ್ಷಗಳ ಹಿಂದೆ ಬೆಳವಡಿ ಮಲ್ಲಮ್ಮನ ದಿಟ್ಟತನದ ಇತಿಹಾಸವಿದೆ. ನಾಡಿಗೆ ಕೊಡುಗೆ ನೀಡಿದ ಅವರ ಹೋರಾಟವನ್ನು ನಾವೆಲ್ಲರೂ ಸ್ಮರಿಸಬೇಕು.

ನಮ್ಮ ನಾಡು ಕೇವಲ ಗಂಡು ಮೆಟ್ಟಿದ ನಾಡು ಮಾತ್ರವಲ್ಲದೇ ವೀರ ವನಿತೆಯರನ್ನು ಕೊಟ್ಟ ಹೆಮ್ಮಯ ನಾಡು. ಅವತ್ತಿನ ಕಾಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ದೊಡ್ಡ ಸಾಮ್ರಾಜ್ಯದ ವಿರುದ್ಧ ಹೋರಾಡುವ ಮೂಲಕ ದಿಟ್ಟತನ ತೋರಿ ಮರಾಠ ಸೈನ್ಯ ಹಿಮ್ಮೆಟ್ಟಿಸಿದ ಬಳಿಕ ವೀರರಾಣಿ ಬೆಳವಡಿ ಮಲ್ಲಮ್ಮನ ಸಾಹಸಕ್ಕೆ ಮೆಚ್ಚಿ ಶಿವಾಜಿ ಮಹಾರಾಜರು ಸಹೋದರಿಯಾಗಿ ಸ್ವೀಕರಿಸಿದರು.

ಉತ್ಸವ ನಾಡಿನ ಹಬ್ಬವಾಗಲಿ:

ಕಿತ್ತೂರು ಚನ್ನಮ್ಮನ ಹಾಗೂ ಬೆಳವಡಿ ಮಲ್ಲಮ್ಮನ ಉತ್ಸವ ಈ ನಾಡಿನ ಸಂಸ್ಕೃತಿ, ಇತಿಹಾಸ ತಿಳಿಸಿಕೊಡುವ ಹೆಮ್ಮೆಯ ಉತ್ಸವಗಳಾಗಿವೆ. ಮುಂದಿನ ದಿನಗಳಲ್ಲಿ ಉತ್ಸವಗಳು ನಾಡ ಹಬ್ಬವಾಗಿ ಪರಿವರ್ತನೆಯಾಗಲಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಿತ್ತೂರು ರಾಣಿ ಚನ್ನಮ್ಮ ,ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ ಸೇರಿದಂತೆ ಹಲವಾರು ವೀರ ವನಿತೆಯರಿಗೆ ಭಾರತ ಮಾತೆ ಜನ್ಮ ನೀಡಿದ್ದಾಳೆ. ವೀರ ರಾಣಿ ಬೆಳವಡಿ ಮಲ್ಲಮ್ಮ ತಮ್ಮ ಸಂಸ್ಥಾನದ ಆಪತ್ತಿನ ಸಮಯದಲ್ಲಿ ಮರಾಠ ಸೈನ್ಯದ ವಿರುದ್ಧ ಹೋರಾಡಿ ಜಯ ಸಾಧಿಸುವ ಮೂಲಕ ಮಹಿಳೆಯರ ಶಕ್ತಿಯ ಕುರಿತು ನಾಡಿಗೆ ತೋರಿಸಿಕೊಟ್ಟಿದ್ದಾರೆ.

ರಾಣಿ ಮಲ್ಲಮ್ಮನ ಇತಿಹಾಸವನ್ನು ಇಡೀ ನಾಡಿಗೆ ತಿಳಿಸುವ ಉದ್ದೇಶದಿಂದ ಸರ್ಕಾರ ಬೆಳವಡಿ ಮಲ್ಲಮ್ಮನ ಉತ್ಸವ ನಡೆಸುತ್ತಿದೆ. ಬೆಳವಡಿ ಸಂಸ್ಥಾನದ ಮಹಿಳಾ ಸೈನ್ಯದ ಹೋರಾಟದ ದಿಟ್ಟತನವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು
ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಪ್ರಶಸ್ತಿ ಪ್ರಧಾನ;

ಇದಕ್ಕೂ ಮುಂಚೆ ಬೈಲಹೊಂಗಲ ಕಾರ್ಮೆಲ್ ವಿದ್ಯಾ ವೀಕಾಸ ಕೇಂದ್ರ, ಬುದ್ದಿ ಮಾಂದ್ಯ ಮಕ್ಕಳ ವಸತಿ ಶಾಲೆಯ ಪ್ರಾಚಾರ್ಯರಾದ ರೀತಾ ಪಿಂಟೋ ಅವರಿಗೆ ವೀರ ರಾಣಿ ಮಲ್ಲಮ್ಮನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಳಿಕ ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಲೇಖಕ ರಾಮಣ್ಣ ತಟ್ಟಿ ಅವರು ರಚಿಸಿದ “ಬೀಳದ ಬೆಳವಡಿ ಆ ಇಪ್ಪತ್ತೇಳು ದಿನಗಳು” ಎಂಬ ಪುಸ್ತಕ ಬಿಡುಗಡೆ ಮಾಡಿದರು.

ಹೂಲಿ ಹಿರೇಮಠ ಬೆಳವಡಿ ಸಂಸ್ಥಾನದ ರಾಜಾಗುರುಗಳಾದ ಶ್ರೀ ಶಿವಮಹಾಂತ ಶಿವಾಚಾರ್ಯ ಮಹಾಸ್ವಾಮಿಜಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ,
ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕಿರಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಎಸ್.ಕೆ ಚನ್ನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ, ಉಪಾಧ್ಯಕ್ಷೆ ಸಂಗೀತ,ಹಾಜರಿದ್ದರು.

error: Content is protected !!