ಬೆಳಗಾವಿ-27:ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆಯನ್ನು ತಯಾರಿಸಿ, ಜನರ ಕನಿಷ್ಟ ಮೂಲಭೂತ ಸಮಸ್ಯೆಗಳು ತ್ವರಿತವಾಗಿ ಪರಿಹರಿಸುವಂತೆ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷದ ನೇತೃತ್ವದಲ್ಲಿ ರೈತರು, ನರೇಗಾ ಕಾರ್ಮಿಕರು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ, ಪಕ್ಷದ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಕಾಮ್ರೇಡ್ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ತೀವ್ರವಾದ ಬರಗಾಲವಿದೆ. ರೈತರು-ಕೃಷಿ ಕೂಲಿ ಕಾರ್ಮಿಕರು ತೀವ್ರವಾದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಬರ ಪರಿಹಾರ ನೀಡಿಲ್ಲ. ತೀವ್ರ ಬರಗಾಲವಿರುವುದರಿಂದ ಬರಗಾಲ ಕಾಮಗಾರಿ ಆರಂಭಿಸಿ ಕೂಲಿ ಕಾರ್ಮಿಕರ ಗುಳೆಯನ್ನು ತಪ್ಪಿಸಬೇಕು ಹಾಗೂ ಜಾನುವಾರುಗಳಿಗೆ ಮೇವು ಕೇಂದ್ರಗಳನ್ನು ಸ್ಥಾಪನೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಅಸಂಖ್ಯಾತ ಯುವಜನರು ನಿರುದ್ಯೋಗಿಗಳಾಗಿದ್ದು, ಸರಕಾರದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಉದ್ಯೋಗ ಸೃಷ್ಟಿಗೆ ಪೂರಕವಾದ ಉದ್ಯಮಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕು. ಬೆಳಗಾವಿ ನಗರವು ರಾಜ್ಯದ ಎರಡನೇ ರಾಜಧಾನಿಯೆಂಬಂತೆ ಬಿಂಬಿತವಾಗಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಸಾಗಿದೆ. ಇಲ್ಲಿ ಸುವರ್ಣಸೌಧವೂ ನಿರ್ಮಾಣವಾಗಿ ವರ್ಷದಲ್ಲೊಮ್ಮೆ ಕಾಟಾಚಾರಕ್ಕೆಂಬಂತೆ ಅಧಿವೇಶನ ನಡೆಯುತ್ತದೆ. ಆದರೆ ಜನರು ಬೆಂಗಳೂರಿಗೆ ಅಲೆಯುವುದೇನೂ ತಪ್ಪಿಲ್ಲ. ಅದಕ್ಕೆ ಇತ್ತೀಚೆಗೆ ನಡೆದ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ಹರಿದು ಬಂದ ಅರ್ಜಿಗಳೇ ಸಾಕ್ಷಿ. ಆದ್ದರಿಂದ ಸರಕಾರದ ಅರ್ಧದಷ್ಟು ಇಲಾಖೆಗಳನ್ನಾದರೂ ಸುವರ್ಣಸೌಧಕ್ಕೆ ಸ್ಥಳಾಂತರಗೊಳಿಸುವ ಕೆಲಸ ತುರ್ತಾಗಿ ಆಗಬೇಕು. ಬೆಳಗಾವಿ ಜಿಲ್ಲೆಯಲ್ಲಿ ಮರ್ನಾಲ್ಕು ದೊಡ್ಡ ನದಿಗಳಿದ್ದರೂ ಜನರು ಕುಡಿಯುವ ನೀರಿಗೆ ಹಾಹಾಕಾರ ಪಡಬೇಕಾಗಿದೆ. ಬೆಳಗಾವಿ ನಗರದಲ್ಲಿ ಈಗ ಮೂರು ದಿನಕೊಮ್ಮೆ ನೀರು ಬಿಡಲಾಗುತ್ತಿದೆ. ಅದೂ ಕೂಡಾ ಜನರ ಅವಶ್ಯಕತೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಹಳ್ಳಿಗಳ ನೀರಿನ ವ್ಯವಸ್ಥೆಯಂತೂ ಅಯೋಮಯವಾಗಿದೆ. ಜಿಲ್ಲೆಯ ಬಹುತೇಕ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಕಸ ವಿಲೇವಾರಿ, ಚರಂಡಿ ಸ್ವಚ್ಛತೆ, ರಾಜಕಾಲುವೆಗಳ ಸ್ವಚ್ಛತೆ ನಿರಂತರವಾಗಿ ನಡೆಯುತ್ತಿಲ್ಲ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಆದ್ಯತೆ ನೀಡಬೇಕೆಂದು ಅವರು ಹೇಳಿದರು.
ಎಸ್ಯುಸಿಐ (ಕಮ್ಯೂನಿಸ್ಟ್) ಪಕ್ಷದ ನಾಯಕ ಕಾಮ್ರೇಡ್ ಲಕ್ಷ್ಮಣ ಜಡಗನ್ನವರ ಮಾತನಾಡಿ, ಜಿಲ್ಲೆಯಲ್ಲಿ ಹೊಸದಾಗಿ ಬಹು ಸೌಲಭ್ಯಗಳುಳ್ಳ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯ ಕಟ್ಟಡ ಉದ್ಘಾಟನೆಯಾಗಿ ವರ್ಷವೇ ಕಳೆದರೂ ಅದು ಕಾರ್ಯಾರಂಭ ಮಾಡಿಲ್ಲ. ಅದನ್ನು ಕೂಡಲೇ ಪ್ರಾರಂಭಿಸಿ ತಜ್ಞವೈದ್ಯರ ನೇಮಕ ಮಾಡಬೇಕು. ಮತ್ತು ಸಕಲ ಚಿಕಿತ್ಸೆ ಹಾಗೂ ಔಷಧಿಗಳು ಉಚಿತವಾಗಿ ಎಲ್ಲರಿಗೂ ನಿರಂತರವಾಗಿ ಸಿಗುವಂತಾಗಬೇಕು ಎಂದರು.
ಬೆಳಗಾವಿ ರಾಜ್ಯದಲ್ಲಿಯೇ ಅತಿ ದೊಡ್ಡ ಜಿಲ್ಲೆಯಾಗಿದ್ದು, ಗಡಿ ಭಾಗದ ಜನರು ಜಿಲ್ಲಾ ಕೇಂದ್ರಕ್ಕೆ ಬರಲು ಪರದಾಡುವಂತಾಗಿದೆ. ಆದ್ದರಿಂದ ಸರಕಾರವು ವೈಜ್ಞಾನಿಕವಾಗಿ ಜಿಲ್ಲೆಯನ್ನು ವಿಭಜನೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಜಿಲ್ಲೆಯ ಪ್ರಮುಖ ಬೆಳೆ ಕಬ್ಬು ಆಗಿದ್ದು, ಬರಗಾಲದಿಂದಾಗಿ ಬೆಳೆಗಾರರಿಗೆ ಸೂಕ್ತ ಇಳುವರಿ ಸಿಗದೇ ನಷ್ಟಕ್ಕೊಳಗಾಗಿದ್ದಾರೆ. ಅವರಿಗೂ ಕೂಡ ಬೆಳೆ ಪರಿಹಾರ ನೀಡಬೇಕು. ಕಾರ್ಖಾನೆಗೆ ಕಬ್ಬು ಕಳಿಸಿದ ೧೫ ದಿನಗಳೊಗಾಗಿ ಕಬ್ಬಿನ ಬಿಲ್ ಅನ್ನು ರೈತರ ಖಾತೆಗಳಿಗೆ ಜಮಾ ಮಾಡಬೇಕು.
ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದ ಶಾಲಾ ಕಾಲೇಜುಗಳಲ್ಲಿ ಬೋಧಕರ ಕೊರತೆ ತೀವ್ರವಾಗಿದ್ದು, ಕೂಡಲೇ ಖಾಯಂ ನೇಮಕಾತಿಗಳನ್ನು ಮಾಡಬೇಕು. ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಬೇಡಿಕೆಗಳಾದ
೧.ಬರಗಾಲದಲ್ಲಿ ನರೇಗಾ ಯೋಜನೆಯ ಮಾನವ ದಿನಗಳನ್ನು ೧೫೦ ದಿನಗಳಿಗೆ ಹೆಚ್ಚಿಸಲು ಅವಕಾಶವಿದೆ. ಅದನ್ನು ಕೂಡಲೇ ಜಾರಿ ಮಾಡಬೇಕು.
೨. ನರೇಗಾ ಕೂಲಿಯನ್ನು ೬೦೦ರೂಪಾಯಿಗಳಿಗೆ ಹಾಗೂ ಮಾನವ ದಿನಗಳನ್ನು ೨೦೦ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಗುಳೆಯನ್ನು ತಪ್ಪಿಸಲು ತಕ್ಷಣ ಬರಗಾಲ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು.
೩. ಜಾನುವಾರುಗಳಿಗೆ ಮೇವು ಕೇಂದ್ರ ಸ್ಥಾಪನೆ ಮಾಡಬೇಕು.
೪. ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರವನ್ನು ವಿತರಿಸಬೇಕು.
೫. ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುವ ಶೈಕ್ಷಣಿಕ ಭತ್ಯೆಯನ್ನು ಹೆಚ್ಚು ಮಾಡಬೇಕು.
೬. ಯುವಜನರಿಗೆ ಉದ್ಯೋಗ ನೀಡಲು ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.
೭. ಕಾರ್ಖಾನೆಗಳಿಗೆ ಕಳಿಸಿದ ಕಬ್ಬಿನ ಬಿಲ್ಲು ರೈತರಿಗೆ ಸಕಾಲದಲ್ಲಿ ಪಾವತಿಸಬೇಕು. ಬರಗಾಲದಿಂದ ಹಾನಿಯಾದ ಕಬ್ಬಿಗೆ ಸೂಕ್ತ ಪರಿಹಾರ ನೀಡಬೇಕು.
೮. ಬೇಸಿಗೆಯಲ್ಲಿ ಬೆಳಗಾವಿ ನಗರ ಸೇರಿದಂತೆ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಎಲ್ಲಾ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ವ್ಯವಸ್ಥೆಯಾಗಬೇಕು ಹಾಗೂ ಬೆಳಗಾವಿ ನಗರ ಹಾಗೂ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ದುರಸ್ತಿ ಮಾಡಬೇಕು ಮತ್ತು ಸ್ವಚ್ಛತೆಯನ್ನು ಕಾಪಾಡಬೇಕು.
೯. ಸಿವಿಲ್ ಆಸ್ಪತ್ರೆಯ ನೂತನ ಕಟ್ಟಡ ಕೂಡಲೇ ಕರ್ಯಾರಂಭ ಮಾಡಬೇಕು. ರೋಗಿಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗಬೇಕು.
೧೦. ಬೆಳಗಾವಿ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳು, ಕಾಲೇಜುಗಳು, ಐಟಿಐ, ಡಿಪ್ಲೋಮೋ, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಖಾಲಿ ಇರುವ ಎಲ್ಲಾ ಶಿಕ್ಷಕರ/ಬೋದಕ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.
೧೧. ಬೆಳಗಾವಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಹಾಗೂ ಹೆಚ್ಚಿನ ವಸತಿ ನಿಲಯಗಳನ್ನು ತೆರೆಯಬೇಕು.
೧೨. ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಅವಶ್ಯಕತೆಗನುಗುಣವಾಗಿ ತಜ್ಞ ವೈದ್ಯ, ಸಿಬ್ಬಂದಿ ನೇಮಕಾತಿ ಮಾಡಬೇಕು.
೧೩. ಧಾರವಾಡದಿಂದ ಸವದತ್ತಿ ಮಾರ್ಗವಾಗಿ ಕುಡಚಿಯನ್ನು ಸೇರುವಂತೆ ರೈಲು ಮಾರ್ಗವನ್ನು ನಿರ್ಮಾಣ ಮಾಡಬೇಕು.
೧೪. ಬೆಳಗಾವಿ ನಗರದ ನಗರ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು ಹಾಗೂ ವಿವಿಧ ಮಾರ್ಗಗಳ ಮತ್ತು ಬಸ್ಸುಗಳ ಓಡಾಟದ ವೇಳಾಪಟ್ಟಿಯನ್ನು ಪ್ರಕಟಿಸಬೇಕು. ಹಾಗೂ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಬಸ್ಸುಗಳನ್ನು ಬಿಡಬೇಕು.
೧೫. ಜಿಲ್ಲೆಗೆ ಮಂಜೂರಾದ ವಿವಿಧ ನೀರಾವರಿ ಯೋಜನೆಗಳನ್ನು ಕೂಡಲೇ ಕರ್ಯಾರಂಭ ಮಾಡಿ, ಕಾಲಮಿತಿಯೊಳಗೆ ಮುಗಿಸಬೇಕು. ಹಾಗೂ ಎಲ್ಲಾ ಕೆರೆಗಳನ್ನು ತುಂಬಿಸಬೇಕು.
೧೬. ಸುವರ್ಣ ವಿಧಾನ ಸೌಧಕ್ಕೆ ಪ್ರಮುಖ ಇಲಾಖೆಗಳು ಸ್ಥಳಾಂತರವಾಗಬೇಕು.
ಪಕ್ಷದ ಸದಸ್ಯರಾದ ಲಕ್ಕಪ್ಪ ಬಿಜ್ಜನ್ನವರ, ರಾಜು ಗಾಣಗಿ, ಮತ್ತಿತರರು ಉಪಸ್ಥಿತರಿದ್ದರು.