ಬೆಂಗಳೂರು-25:ಕರ್ನಾಟಕ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ “ಯುವನಿಧಿ” ಯೋಜನೆಯಲ್ಲಿ ಪದವಿ ಸ್ನಾತಕೊತ್ತರ ಪದವಿ ಮತ್ತು ಡಿಪ್ಲೊಮಾಗಳನ್ನು 2022-23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ 2023ರಲ್ಲಿ ತೇರ್ಗಡೆಯಾಗಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಈಗಾಗಲೇ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿಯಾಗಿದ್ದು ಹಾಗೂ ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿವಸಗಳು ಪೂರೈಸಿದ ಅಭ್ಯರ್ಥಿಗಳಿಗೆ ಜನವರಿ 2024 ರಂದು ನೇರ ನಗದು ವರ್ಗಾವಣೆ ಮಾಡಲಾಗಿರುತ್ತದೆ. ಅಭ್ಯರ್ಥಿಗಳು ಈ ಪ್ರಯೋಜನವನ್ನು ಪ್ರತಿ ತಿಂಗಳು ಪಡೆಯಬೇಕಿದ್ದರೆ, ಪ್ರತಿ ಮಾಹೆಯಲ್ಲಿ ತಾನು ನಿರುದ್ಯೋಗಿಯೆಂದು, ವ್ಯಾಸಂಗ ಮುಂದುವರೆಸುತ್ತಿಲ್ಲವೆಂದು ಹಾಗೂ ಸ್ವಯಂ ಉದ್ಯೋಗಿಯಲ್ಲವೆಂದು ಸ್ವಯಂ ಘೋಷಣೆಯನ್ನು ಮಾಡಬೇಕಾಗಿರುತ್ತದೆ. ಪ್ರಸ್ತಕ ಫೆಬ್ರವರಿ ಮಾಹೆಯಲ್ಲಿ ದಿನಾಂಕ: 29-02-2024 ರವರೆಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.
ಪ್ರಯೋಜನೆ ಪಡೆಯುತ್ತಿರುವ ಅರ್ಹ ಅಭ್ಯರ್ಥಿಗಳು ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡದಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆಯನ್ನು ಮಾಡಲಾಗುವುದಿಲ್ಲ ಎಂಬುದಾಗಿ ತಿಳಿಯಪಡಿಸಲಾಗಿದೆ. ಈಗಾಗಲೇ ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಜನವರಿ 2024ರಲ್ಲಿ ನೇರ ನಗದು ವರ್ಗಾವಣೆ ಮಾಡಲಾಗಿದ್ದು, ಮುಂದಿನ ತಿಂಗಳು ಪ್ರಯೋಜನ ಪಡೆದುಕೊಳ್ಳಲು ಸ್ವಯಂ ಘೋಷಣೆ ಮಾಡಬೇಕಾಗಿರುವ ಕುರಿತು ಎಸ್‌ಎಂಎಸ್ ಸಂದೇಶವನ್ನು ಅಭ್ಯರ್ಥಿಗಳಿಗೆ ರವಾನಿಸಲಾಗಿರುತ್ತದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಯನ್ನು ಹೊಂದಿರತಕ್ಕದ್ದು. ಅಭ್ಯರ್ಥಿಗಳು ಸ್ವಯಂ ಘೋಷಣೆ ಮಾಡಿಕೊಳ್ಳಲು https://sevasindhugs.karnataka.gov.in ವೆಬ್‌ಸೈಟ್ ವೀಕ್ಷಿಸಬಹುದು,ಹೆಚ್ಚಿನ ವಿವರಗಳಿಗೆ ದೂ.ಸಂಖ್ಯೆ 080-25189112 ಸಂಪರ್ಕಿಸಬಹುದು ಎಂದು ಎಂದು ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.