23/12/2024
IMG_20240224_142547

ಬೆಳಗಾವಿ-25: ಬೆಳಗಾವಿ-ಚೋರ್ಲಾ-ಗೋವಾ ರಸ್ತೆ ನಿರ್ಮಾಣ ಮಾಡಬೇಕು ಎಂಬುದು ಅನೇಕ ದಿನಗಳ ಬೇಡಿಕೆಯಾಗಿತ್ತು. ಈ ನಿಟ್ಟಿನಲ್ಲಿ 43.35 ಕಿ.ಮೀ ರಸ್ತೆ, ಚರಂಡಿ, ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 11 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿವೆ ಎಂದು  ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

IMG 20240221 WA0004 3 -

ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿ ಶನಿವಾರ ಬೆಳಗಾವಿ-ಚೋರ್ಲಾ-ಗೋವಾ ಗಡಿಯವರೆಗಿನ ರಾಜ್ಯ ಹೆದ್ದಾರಿ-748ಎ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕರ್ನಾಟಕ ಗೋವಾ ಎರಡು ರಾಜ್ಯಗಳ ಮುಖ್ಯ ಹೆದ್ದಾರಿ ಇದಾಗಿದ್ದು,  ರಸ್ತೆ ಸುಧಾರಣೆಯಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಹೊಸ ರಸ್ತೆ ನಿರ್ಮಾಣದ ಜೊತೆಗೆ 10 ರಿಂದ 12 ಕಿಮೀ ರಸ್ತೆ ದುರಸ್ತಿ ಕಾಮಗಾರಿ ಕೂಡ ಕೈಗೆತ್ತಿಕೊಳ್ಳಲಾಗುವುದು. ರಸ್ತೆ ಹಾಳಾಗದಂತೆ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಲಾಗುವುದು.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ರಾಜ್ಯದಲ್ಲಿ ಅತೀ ವೇಗವಾಗಿ ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಅರಣ್ಯ ಇಲಾಖೆಯ ಸ್ಥಳ ಇರುವುದರಿಂದ ರಸ್ತೆ ಅಗಲೀಕರಣ ಸಾಧ್ಯವಿಲ್ಲ ಎಂದು ಹೇಳಿದರು.

ಗೋಕಾಕ್ ಫಾಲ್ಸ್ ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡಲು ಹಾಗೂ ಬೆಳಗಾವಿ ನಗರದಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದರು. 

ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಅದರಂತೆ ಹೊಸ ಬಜೆಟ್ ನಲ್ಲಿ ಘೋಷಿಸಿರುವ ಅನೇಕ ಉತ್ತಮ ಯೋಜನೆಗಳನ್ನು ಜನರಿಗೆ ತಲುಪಿಸಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.

ಈ ವೇಳೆ ಖಾನಾಪೂರ ಶಾಸಕ ವಿಠ್ಠಲ ಹಲಗೇಕರ ಅವರು

ಮಾತನಾಡಿ, “ಈಗಿರುವ ರಸ್ತೆ ಮಳೆಗಾಲದಲ್ಲಿ ಬಹಳಷ್ಟು ಹಾಳಾಗುತ್ತಿದೆ. ಬೆಳಗಾವಿಯಿಂದ ಗೋವಾ ವರೆಗೆ ಸಂಚರಿಸುವ ರಸ್ತೆಗಳಲ್ಲಿ ಚೋರ್ಲಾ ಮಾರ್ಗ ರಸ್ತೆ ಸಹ ಮುಖ್ಯ ರಸ್ತೆಯಾಗಿದೆ. ಆದ್ದರಿಂದ ಪ್ರಯಾಣಿಕರು ಹಾಗೂ ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ:

ಇದಕ್ಕೂ ಮುಂಚೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಖಾನಾಪೂರ ಶಾಸಕ ವಿಠ್ಠಲ ಹಲಗೇಕರ, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ಅವರು

ಬೆಳಗಾವಿ-ಚೋರ್ಲಾ-ಗೋವಾ ರಸ್ತೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್, ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ, ಕಣಕುಂಬಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರು, ರಾಷ್ಟ್ರೀಯ ಹೆದ್ದಾರಿ ಮುಖ್ಯ ಇಂಜಿನಿಯರ್ ಸೇರಿದಂತೆ ಕಣಕುಂಬಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

 

error: Content is protected !!