ಬೆಳಗಾವಿ-24:ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಸ್ತಿಗಳ ಮಾಲೀಕತ್ವ ಹಕ್ಕು ವರ್ಗಾವಣೆಯಾದ ನಂತರ ಸಂಬಂಧಪಟ್ಟ ಆಸ್ತಿಗಳ ಮಾಲೀಕರು ನಳ, ನೀರು ಮತ್ತು ಒಳಚರಂಡಿ ಸಂಪರ್ಕಗಳಿಗೆ ಮಾಲೀಕತ್ವ ವರ್ಗಾವಣೆ ಮಾಡಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಳಗಾವಿ ಇವರಿಗೆ ಪ್ರತ್ಯೇಕವಾದ ಮನವಿಯನ್ನು ನೀಡಬೇಕು ಹಾಗೂ ವಿದ್ಯುತ್ ಸರಬರಾಜು ಕಂಪನಿಗೂ ಸಹ ಹಕ್ಕು ಬದಲಾವಣೆ ಮಾಡುವ ಕುರಿತು ಪ್ರತ್ಯೇಕವಾಗಿ ಮನವಿಯನ್ನು ನೀಡಬೇಕಾಗಿರುತ್ತದೆ.
ಇದರಿಂದ ಅರ್ಜಿದಾರರಿಗೆ ಅನಗತ್ಯವಾಗಿ ಆಗುವ ಹೊರೆಯನ್ನು ತಗ್ಗಿಸುವ ದೃಷ್ಠಿಯಿಂದ ಮಾನ್ಯ ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ: ನಅಇ/08/ಜಿಇಎಲ್/2021(ಇ), ಬೆಂಗಳೂರು ಜ. 27 2021 ರ ಪ್ರಕಾರ ಅರ್ಜಿದಾರರಿಂದ ಪ್ರತ್ಯೇಕವಾಗಿ ಮನವಿಯನ್ನು ಸ್ವೀಕರಿಸದೇ ಆಸ್ತಿಗಳ ಮಾಲೀಕತ್ವ ಹಕ್ಕು ವರ್ಗಾವಣೆಯಾದ ತಕ್ಷಣ ಸ್ವಯಂ ಚಾಲಿತವಾಗಿ ನಳ/ನೀರು ಮತ್ತು ಒಳಚರಂಡಿ ಸಂಪರ್ಕಗಳಿಗೆ ಮಾಲೀಕತ್ವ ವರ್ಗಾವಣೆ ಮಾಡಲು ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದೆ ಹಾಗೂ ಸಂಬಂಧಪಟ್ಟ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿಗಳಿಗೆ ಮತ್ತು ವಿದ್ಯುತ್ ಸರಬರಾಜು ಕಂಪನಿ ನಿಯಮಿತಗಳಿಗೆ ಸ್ವಯಂಚಾಲಿತವಾಗಿ ಮಾಹಿತಿಯನ್ನು ನೀಡಲು ಆದೇಶಿಸಿದೆ.
ಈಗಲೂ ಸಹ ನಾಗರಿಕರು ಮಾಲೀಕತ್ವ ಹಕ್ಕು ಬದಲಾವಣೆ ಮಾಡಲು ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿಗೆ ಹಾಗೂ ವಿದ್ಯುತ್ ಸರಬರಾಜು ಕಂಪನಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕ ಸರಕಾರದ ಆದೇಶ ಪ್ರಕಾರ ಸ್ವಯಂಚಾಲಿತವಾಗಿ
ಹಕ್ಕು ಬದಲಾವಣೆ ಮಾಡಲು ಕ್ರಮ ಜರುಗಿಸಬೇಕೆಂದು ಎಂದು ದಿನೇಶ ನಾಶಿಪುಡಿ ಶುಕ್ರವಾರ ಮನವಿ ಸಲ್ಲಿಸಿದರು.